ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ದೇಶದ್ರೋಹಿಯಂತೆ ಚಿತ್ರಿಸಿದ್ದ ಫ್ಲೆಕ್ಸ್ ಪೊಲೀಸರಿಂದ ತೆರವು

|

Updated on: Dec 15, 2023 | 12:09 PM

ಕಿಡಿಗೇಡಿಗಳಿಬ್ಬರು ಕಲರ್ ಸ್ಮೋಕ್ ಕ್ಯಾಂಡಲ್ ಗಳ ಜೊತೆ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದ್ದರೂ, ಸಂಸದ ಪ್ರತಾಪ್ ಸಿಂಹ ಒಂದು ಹೇಳಿಕೆಯನ್ನೂ ನೀಡದಿರುವುದು ಕನ್ನಡಿಗರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಕನಿಷ್ಟ ಒಂದು ಟ್ವೀಟನ್ನಾದರೂ ಮಾಡಿ ತಮ್ಮ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡಬೇಕು.

ಮೈಸೂರು: ನಗರದಲ್ಲಿ ಸಂಸದ ಪ್ರತಾಪ್ ಸಿಂಹ (MP Pratap Simha) ವಿರುದ್ಧ ಅಭಿಯಾನಗಳು ಹೆಚ್ಚುತ್ತಿವೆ. ಕಿಡಿಗೇಡಿಗಳಿಗೆ ವಿಸಿಟರ್ ಪಾಸು (visitor pass) ನೀಡಿ ಪ್ರತಾಪ್, ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೊಡ್ಡಿದ್ದಾರೆ ಅಂತ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮತ್ತು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದರು. ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನಗರದ ಮಹಾರಾಜ ಸರ್ಕಲ್ ನಲ್ಲಿ ಪ್ರತಾಪ್ ಸಿಂಹ ದೇಶದ್ರೋಹಿ ಅಂತ ನಮೂದಿಸಿರುವ ಫ್ಲೆಕ್ಸ್ ಹಾಕಿದೆ. ಫ್ಲೆಕ್ಸ್ ನಲ್ಲಿ ಸಂಸದರನ್ನು ಒಬ್ಬ ಭಯೋತ್ಪಾದಕನಂತೆ ತೋರಿಸಿ ತಾಲಿಬಾನ್ ಉಗ್ರರು ತಲೆಗೆ ಸುತ್ತುವ ಶಮ್ಲಾವನ್ನು ಪ್ರತಾಪ್ ತಲೆಗೆ ಸುತ್ತಿ ಕೈಗಳಲ್ಲಿ ಬಾಂಬ್ ಗಳನ್ನು ಚಿತ್ರಿಸಲಾಗಿದೆ. ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸುವಂತೆ ಜಾಗೃತ ವೇದಿಕೆ ಸಹಿ ಅಭಿಯಾನ ಶುರುಮಾಡಿರುವುದನ್ನು ಫ್ಲೆಕ್ಸ್ ನಲ್ಲಿ ಬರೆಯಲಾಗಿದೆ. ಪೊಲೀಸರು ಫ್ಲೆಕ್ಸ್ ಅನ್ನು ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಿದ ಬಳಿಕ ಪಾಲಿಕೆ ಸಿಬ್ಬಂದಿ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on