ಬೆಳಗಾವಿ ಅಧಿವೇಶನ: ಡಿಕೆ ಶಿವಕುಮಾರ್ ಅಕ್ರಮ ಆದಾಯ ಪ್ರಕರಣ ಕೊನೆಯ ದಿನ ಚರ್ಚೆಗೆ ತಂದ ವಿಪಕ್ಷ ನಾಯಕರು

ಬೆಳಗಾವಿ ಅಧಿವೇಶನ: ಡಿಕೆ ಶಿವಕುಮಾರ್ ಅಕ್ರಮ ಆದಾಯ ಪ್ರಕರಣ ಕೊನೆಯ ದಿನ ಚರ್ಚೆಗೆ ತಂದ ವಿಪಕ್ಷ ನಾಯಕರು

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 15, 2023 | 1:13 PM

ಅಧಿವೇಶನ ಶುರುವಾಗುವ ಮೊದಲು ವಿಪಕ್ಷ ನಾಯಕ ಆರ್ ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕುವುದಾಗಿ ಹೇಳಿದ್ದರು. ಡಿಕೆ ಶಿವಕುಮಾರ್ ಅಕ್ರಮ ಆದಾಯ ಪ್ರಕರಣ ಅವರಿಗೆ ಭಾರೀ ಅಸ್ತ್ರವಾಗಿ ಲಭ್ಯವಾಗಿತ್ತು. ಆದರೆ ಅಧಿವೇಶನದ ಕೊನೆಯ ದಿನ ಅದನ್ನು ಚರ್ಚೆಗೆ ತರುವ ಮೂಲಕ ತಾವು ಸದನದ ಹೊರಗೆ ಬಡಾಯಿ ಕೊಚ್ಚಿಕೊಂಡಿದ್ದು ಅನ್ನೋದನ್ನು ಸಾಬೀತು ಮಾಡಿದ್ದಾರೆ.

ಬೆಳಗಾವಿ: ಡಿಕೆ ಶಿವಕುಮಾರ್ ಅಕ್ರಮ ಆದಾಯ ಪ್ರಕರಣ (DK Shivakumar DA case) ಸಿಬಿಐ ತನಿಖೆಗೆ ನೀಡಿದ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದ ವಿಚಾರ ಬೆಳಗಾವಿ ಅಧಿವೇಶನದ (Belagavi Assembly Session) ಕೊನೆಯ ದಿನ ಚರ್ಚೆಗೆ ಬಂದಿದ್ದು ಸೋಜಿಗ ಮೂಡಿಸುವ ಸಂಗತಿ. ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ಬಿಜೆಪಿ ಸರ್ಕಾರ ಯಾವುದೇ ದುರುದ್ದೇಶ ಇಟ್ಟುಕೊಂಡು ಶಿವಕುಮಾರ್ ಪ್ರಕರಣದ ತನಿಖೆಗೆ ಆದೇಶ ನೀಡಿರಲಿಲ, ಜಾರಿ ನಿರ್ದೇಶನಾಲಯದ ವರದಿ ಮತ್ತು ಆಗಿನ ಅಡ್ವೋಕೇಟ್ ಜನರಲ್ ನೀಡಿದ ಸಲಹೆಯ ಆಧಾರದಲ್ಲಿ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು ಎಂದು ಹೇಳಿ ತನಿಖೆ ಕೊನೆ ಹಂತದಲ್ಲಿರುವಾಗ ಆದೇಶ ವಾಪಸ್ಸು ಪಡೆದಿದ್ದು ಕಾನೂನು ಬಾಹಿರ ಮತ್ತು ಅಸಮರ್ಥನೀಯ ಎನ್ನುತ್ತಾರೆ.

ಸರ್ಕಾರದ ಪರ ಉತ್ತರ ನೀಡಿದ ಗೃಹ ಸಚಿವ ಜಿ ಪರಮೇಶ್ವರ ಸ್ಪಷ್ಟನೆ ನೀಡುವ ಬದಲು ವಿಷಯಾಂತರ ಮಾಡುವ ಪ್ರಯತ್ನ ಮಾಡುತ್ತಾರೆ. ಇದು, ವೈಯಕ್ತಿಕ ವಿಚಾರ, ರೂಲ್ 60 ರಲ್ಲಿ ಸೇರಿಸಲಾಗದು, ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಮತ್ತು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಚರ್ಚೆ ಮಾಡಿದರೆ ನ್ಯಾಯಾಂಗ ನಿಂದನೆ ಆಗುತ್ತದೆ ಎನ್ನುತ್ತಾರೆ. ಅವರ ಉತ್ತರದಿಂದ ಕೆರಳುವ ಬಿಜೆಪಿ ಶಾಸಕ ಸುನೀಲ್ ಕುಮಾರ್, ಅದು ವೈಯಕ್ತಿಕ ವಿಚಾರವಾದರೆ, ಅದ್ಹೇಗೆ ರಾಜ್ಯ ಸಚಿವ ಸಂಪುಟ ತನಿಖೆಯ ಆದೇಶ ವಾಪಸ್ಸು ಪಡೆಯುತು ಅನ್ನುತ್ತಾರೆ. ನಂತರ ಬಸಲಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಸರ್ಕಾರದ ಮೇಲೆ ಮುಗಿಬೀಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ