ಯಾದಗಿರಿ: ನಕಲಿ ಆಹಾರ ಸುರಕ್ಷತಾ ಅಧಿಕಾರಿಯ ಚಳಿ ಬಿಡಿಸಿದ ಅಂಗಡಿ ಮಾಲಿಕರು
ಆಹಾರ ಸುರಕ್ಷತಾ ಅಧಿಕಾರಿ ಎಂದು ಸುಳ್ಳು ಹೇಳಿ ಕಿರಾಣಿ ಅಂಗಡಿ, ಬೇಕರಿ, ರೈಸ್ ಮಿಲ್ ಸೇರಿದಂತೆ ಯಾದಗಿರಿ ನಗರದ ವಿವಿಧ ಅಂಗಡಿ ಮಾಲಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಯಾದಗಿರಿ, ಡಿಸೆಂಬರ್ 15: ಆಹಾರ ಸುರಕ್ಷತಾ ಅಧಿಕಾರಿ ಎಂದು ಸುಳ್ಳು ಹೇಳಿ ಕಿರಾಣಿ ಅಂಗಡಿ, ಬೇಕರಿ, ರೈಸ್ ಮಿಲ್ (Rice Mill) ಸೇರಿದಂತೆ ಯಾದಗಿರಿ (Yadgiri) ನಗರದ ವಿವಿಧ ಅಂಗಡಿ ಮಾಲಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ರಾಯಚೂರು ಮೂಲದ ವಿಜಯ ಕುಮಾರ್ ಆಹಾರ ಸುರಕ್ಷತಾ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ನಗರದ ವಿವಿಧ ಕಿರಾಣಿ ಅಂಗಡಿ, ಬೇಕರಿ ಮತ್ತು ರೈಸ್ ಮಿಲ್ಗಳಿಗೆ ಹೋಗುತ್ತಿದ್ದನು.
ಇಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲವೆಂದು ಹೇಳಿ ಅಂಗಡಿ ಮಾಲೀಕರಿಗೆ ಹೆದರಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದನು. ಹೀಗೆ ಕಳೆದ ಒಂದು ವಾರದಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಾನೆ. ಇಂದು (ಡಿ.15) ನಗರ ಒಂದು ಅಂಗಡಿಗೆ ಹೋಗಿ, ಮಾಲಿಕರಿಂದ ಹಣ ವಸೂಲಿ ಮಾಡಲು ಮುಂದಾಗಿದ್ದಾನೆ. ಆದರೆ ಅಂಗಡಿ ಮಾಲೀಕರಿಗೆ ಶಂಕೆ ಬಂದ ಕೂಡಲೆ ನಿಜವಾದ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ.
ಆಗ ವಿಜಯ ಕುಮಾರ್ ಬಣ್ಣ ಬಯಲಾಗಿದೆ. ನಕಲಿ ಅಧಿಕಾರಿ ಎಂದು ಗೊತ್ತಾಗುತ್ತಿದ್ದ ಹಾಗೆ ನಾನು (ವಿಜಯ್ ಕುಮಾರ್) ಭ್ರಷ್ಟಾಚಾರ ವಿರೋಧಿ ದಳದಿಂದ ಬಂದಿದ್ದೆನೆ ಎಂದಿದ್ದಾನೆ. ಮಾತು ಬದಲಾಯಿಸುತ್ತಿದ್ದಂತೆ ಮತ್ತು ಬಣ್ಣ ಬಯಲಾಗುತ್ತಿದ್ದಂತೆ ಕುಪಿತಗೊಂಡ ಅಂಗಡಿ ಮಾಲಿಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಯಾದಗಿರಿ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ