ಫಾರಂಹೌಸ್‌ಗೆ ನುಗ್ಗಿ ನಾಯಿ ಮೇಲೆ ಚಿರತೆ ಅಟ್ಯಾಕ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Edited By:

Updated on: Mar 14, 2026 | 8:02 AM

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಗೇಟ್ ಬಳಿಯ ಫಾರಂಹೌಸ್‌ಗೆ ಚಿರತೆಯೊಂದು ನುಗ್ಗಿ ನಾಯಿಯ ಮೇಲೆ ದಾಳಿ ಮಾಡಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಅರಣ್ಯ ಇಲಾಖೆಗೆ ಪದೇ ಪದೇ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

ನಂಜನಗೂಡು, ಮಾ.14: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಗೇಟ್ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನವಸತಿ ಪ್ರದೇಶಕ್ಕೆ ನುಗ್ಗಿ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಮಧ್ಯರಾತ್ರಿ ಫಾರಂಹೌಸ್‌ವೊಂದಕ್ಕೆ ನುಗ್ಗಿದ ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದ ಘಟನೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಹೊರಳವಾಡಿ ಗೇಟ್ ಸಮೀಪವಿರುವ ಗಿರೀಶ್ ಎಂಬುವರಿಗೆ ಸೇರಿದ ‘ಅಭಿ ಫಾರಂ ಹೌಸ್’ಗೆ ಮಧ್ಯರಾತ್ರಿ ಚಿರತೆ ನುಗ್ಗಿದೆ. ಅವರು ಸಾಕಿರುವ ನಾಯಿಯ ಮೇಲೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ಫಾರಂಹೌಸ್ ಮಾಲೀಕರು ಮತ್ತು ಸಿಬ್ಬಂದಿ ಜೋರಾಗಿ ಕೂಗಾಡಿದ್ದಾರೆ. ಕಿರುಚಾಟ ಮತ್ತು ಶಬ್ದಕ್ಕೆ ಹೆದರಿದ ಚಿರತೆ ನಾಯಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದೆ. ಚಿರತೆಯು ಫಾರಂಹೌಸ್ ಆವರಣದಲ್ಲಿ ಓಡಾಡುತ್ತಿರುವ ಮತ್ತು ನಾಯಿಯ ಮೇಲೆ ದಾಳಿ ನಡೆಸುತ್ತಿರುವ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಹೊರಳವಾಡಿ ಗ್ರಾಮದ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಚಿರತೆ ಓಡಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿ, ಬೋನು ಇಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾರಾದರೂ ಪ್ರಾಣ ಕಳೆದುಕೊಂಡ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us