ಮೇಕೆದಾಟು ಯೋಜನೆ ಸಂಬಂಧಿಸಿದಂತೆ ಕರ್ನಾಟಕದ ಜೊತೆ ತಮಿಳುನಾಡಿನ ತಕರಾರೇ ಇಲ್ಲ: ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2022 | 10:40 PM

ಸುಪ್ರೀಮ್ ಕೋರ್ಟ್ ಸೂಚಿಸಿರುವ ಪ್ರಮಾಣದಷ್ಟು ಅಲ್ಲದೆ ಕಾವೇರಿಯ 582 ಟಿ ಎಮ್ ಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಹಾಗಾಗಿ ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಮುಂದಾಗಿದ್ದೇವೆ. ಅದಕ್ಕೆ ಯಾವ ದೊಣ್ಣೆ ನಾಯಕನ ಅನುಮತಿ ನಮಗೆ ಬೇಕಿಲ್ಲ ಅಂತ ಸಿದ್ದರಾಮಯ್ಯ ಹೇಳಿದರು.

ಉಕ್ರೇನಲ್ಲಿ ಶೆಲ್ಲಿಂಗ್ ಗೆ ಬಲಿಯಾದ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಅವ ಮನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಬುಧವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಹಾವೇರಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿದ ಮಾಜಿ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆ (Mekedatu Project) ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಹರಿಹಾಯ್ದರು. ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು (Tamil Nadu) ಮತ್ತು ಕರ್ನಾಟಕದ (Karnataka) ನಡುವೆ ವಿವಾದವೇ ಇಲ್ಲ. 2018ರಲ್ಲೇ ಸುಪ್ರೀಮ್ ಕೋರ್ಟ್ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿಗೆ ಎಷ್ಟೆಷ್ಟು ನೀರು ದಕ್ಕಬೇಕು ಅಂತ ತೀರ್ಪು ನೀಡಿಯಾಗಿದೆ, ಆ ತೀರ್ಪಿಗೆ ಅನುಗುಣವಾಗಿಯೇ ತಮಿಳು ನಾಡುಗೆ 177.75 ಟಿ ಎಮ್ ಸಿ ನೀರನ್ನು ಬಿಡಲಾಗುತ್ತಿದೆ. ಇನ್ನು ತಕರಾರು ಎಲ್ಲಿಯದು? ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರು ಕೇವಲ ವೋಟು ಗಿಟ್ಟಿಸುವ ಉದ್ದೇಶದಿಂದ ತಮಿಳುನಾಡು ಪರ ಮಾತಾಡಿದ್ದಾರೆ ಅಂತ ನನಗನ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ಮೇಕೆದಾಟು ಯೋಜನೆಯನ್ನು ತಮಿಳುನಾಡು ಪ್ರಶ್ನೆ ಮಾಡುವಂತೆಯೇ ಇಲ್ಲ. ಅವರ ಪಾಲಿನ ನೀರು ಹೋಗುತ್ತಿರಬೇಕಾದರೆ ಅವರು ಏನಂತ ಜಗಳ ಕಾಯುತ್ತಾರೆ.

ಸುಪ್ರೀಮ್ ಕೋರ್ಟ್ ಸೂಚಿಸಿರುವ ಪ್ರಮಾಣದಷ್ಟು ಅಲ್ಲದೆ ಕಾವೇರಿಯ 582 ಟಿ ಎಮ್ ಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಹಾಗಾಗಿ ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಮುಂದಾಗಿದ್ದೇವೆ. ಅದಕ್ಕೆ ಯಾವ ದೊಣ್ಣೆ ನಾಯಕನ ಅನುಮತಿ ನಮಗೆ ಬೇಕಿಲ್ಲ ಅಂತ ಸಿದ್ದರಾಮಯ್ಯ ಹೇಳಿದರು.

ಮೇಕೆದಾಟು ಬಳಿ ನಾವು ಜಲಾಶಯ ನಿರ್ಮಿಸುತ್ತಿರುವುದು ಬೆಂಗಳೂರು ಮತ್ತು ಅದರ ಸುತ್ತಮುತ್ತ ಇರುವ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಎಂದು ಹೇಳಿದ ಸಿದ್ದರಾಮಯ್ಯ ಎರಡೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಒಂದು ಎನ್ವಿರಾನ್ಮೆಂಟ್ ಕ್ಲೀಯರನ್ಸ್ ತರುವ ಯೋಗ್ಯತೆ ಇಲ್ಲ ಅಂತ ರಾಜ್ಯ ಸರ್ಕಾರವನ್ನು ಛೇಡಿಸಿದರು.

ಬಿಜೆಪಿ ನಾಯಕರು ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ದನ್ನು ತಾವು ಸದನದಲ್ಲಿ ಡಬ್ಬಾ ಸರ್ಕಾರ ಎಂದು ಗೇಲಿ ಮಾಡಿದ್ದನ್ನು ಅವರು ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ಅವರು ಮೇಕೆದಾಟು ಯೋಜನೆ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವ ವಿಷಯವನ್ನು ಸಹ ಹೇಳಿದರು.

ಇದನ್ನೂ ಓದಿ:   ಬೆಂಗಳೂರಲ್ಲಿ ನೀರು ಟ್ಯಾಂಕರ್ ಮಾಫಿಯಾ ಇದೆ, ಆದಷ್ಟು ಬೇಗ ಮೇಕೆದಾಟು ಯೋಜನೆ ತನ್ನೀ: ಶಿಡ್ಲಘಟ್ಟದಲ್ಲಿ ಡಿಕೆ ಶಿವಕುಮಾರ್ ಮನವಿ!