ಬೆಂಗಳೂರು, (ನವೆಂಬರ್ 10): ಬೆಂಗಳೂರು ಎನ್ನುವ ಮಾಯಾನಗರಿಯಲ್ಲಿ ಟ್ರಾಫಿಕ್ ಕಿರಿಕಿರಿ ಜೊತೆಗೆ ಅಪರಾಧ ಚಟುವಟಿಕೆಗಳಿಗೇನು ಕಮ್ಮಿ ಇಲ್ಲ. ನಗರ ಬೆಳೆದಂತೆ ಅಪರಾಧ ಕೃತ್ಯಗಳು ಸಹ ಹೆಚ್ಚಾಗುತ್ತಲೇ ಇವೆ. ಯಾವ ಏರಿಯಾದಲ್ಲಿ ಏನು ಆಗುತ್ತೇ ಎನ್ನುವುದೇ ಗೊತ್ತಾಗಲ್ಲ. ಹೀಗಿರುವಾಗ ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್ಪೆಕ್ಟರ್ಗಳೇ ಇಲ್ಲ. ಹೌದು… ಇನ್ಸ್‌ಪೆಕ್ಟರ್ ಸಿದ್ದೇಗೌಡ ನಿವೃತ್ತಿ ಬಳಿಕ 6 ತಿಂಗಳಿಂದ ಗಂಗಮ್ಮನಗುಡಿ ಠಾಣೆಗೆ ಇನ್ಸ್‌ಪೆಕ್ಟರ್ ನೇಮಕವಾಗಿಲ್ಲ. ಇನ್ನು ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್ ಹರಿಯಪ್ಪ ನಿವೃತ್ತಿಯಾಗಿದ್ದು, ಈ ಹುದ್ದೆ 3 ತಿಂಗಳಿನಿಂದ ಖಾಲಿ ಇದೆ. ಈ ಎರಡು ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚು. ಆದರೂ ಸಹ ಗೃಹ ಇಲಾಖೆ ಇದುವರೆಗೂ ಇನ್ಸ್ಪೆಕ್ಟರ್ಗಳನ್ನು ನಿಯೋಜನೆ ಮಾಡಿಲ್ಲ.
ಆಸ್ತಿ ಕಲಹ ಸೇರಿದಂತೆ ಇತರೆ ಪ್ರಕರಣಗಳು ಈ ಠಾಣೆಗಳಿಗೆ ಬರುತ್ತವೆ. ಆದ್ರೆ, ಈ ಠಾಣೆಗಳ ಸಿಬ್ಬಂದಿ, ದೂರು ನೀಡಲು ಹೋದವರಿಗೆ ಇನ್ಸ್‌ಪೆಕ್ಟರ್ ಇಲ್ಲ ಎನ್ನುವ ಉಡಾಫೆ ಉತ್ತರ ನೀಡಿ ಕಳುಹಿಸುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿವೆ. ಇಂತಹ ದೊಡ್ಡ ಸಿಟಿಯಲ್ಲಿ ಆರು ತಿಂಗಳು ಗಟ್ಟಲೇ ಓರ್ವ ಇನ್ಸ್ಪೆಕ್ಟರ್ನ ನೇಮಕ ಮಾಡಿಲ್ಲ ಅಂದ್ರೆ ಕಾನೂನು ಸುವ್ಯವಸ್ಥೆ ಕಥೆ ಏನು?