ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಲೆಫ್ಟಿನೆಂಟ್ ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ

Updated on: Apr 23, 2025 | 5:24 PM

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹರಿಯಾಣದ ಕರ್ನಾಲ್‌ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ದುರಂತವಾಗಿ ಸಾವನ್ನಪ್ಪಿದ್ದಾರೆ. ನರ್ವಾಲ್ ಇತ್ತೀಚೆಗೆ ವಿವಾಹವಾಗಿದ್ದರು ಮತ್ತು ರಜೆಯಲ್ಲಿದ್ದರು. ಹೆಂಡತಿಯ ಜೊತೆ ಹನಿಮೂನಿಗೆ ಹೋಗಿದ್ದ ಅವರು ಉಗ್ರರ ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರದೆದುರು ಪತ್ನಿ ಹಿಮಾಂಶಿ ಭಾವುಕ ವಿದಾಯ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ (Pahalgam) ಪ್ರದೇಶದಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ (Lieutenant Vinay Narwal) ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲಾಯಿತು. ಅವರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸುವಾಗ ಅವರ ಪತ್ನಿ ಹಿಮಾಂಶಿ ನರ್ವಾಲ್ ಕಣ್ಣೀರು ಹಾಕುತ್ತಾ, ಭಾವುಕ ವಿದಾಯ ನೀಡಿದ್ದಾರೆ. ವಿನಯ್ ಬಹಳ ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಮುಕ್ತಿ ಸಿಗಲಿ. ಅವರ ಬಗ್ಗೆ ಪ್ರತಿದಿನವೂ ನಾವು ಹೆಮ್ಮೆ ಪಡುತ್ತೇವೆ ಎಂದು ಹಿಮಾಂಶಿ ಭಾವುಕರಾಗಿ ಪತಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ನಿನ್ನೆ ಪಹಲ್ಗಾಮ್​ನ ಹುಲ್ಲುಹಾಸಿನ ಮೇಲೆ ತನ್ನ ಪತಿಯ ಶವದೆದುರು ಕುಳಿತು ಅಸಹಾಯಕಳಾಗಿ ನೋಡುತ್ತಿದ್ದ ಹಿಮಾಂಶಿ ಅವರ ಫೋಟೋ ವೈರಲ್ ಆಗಿತ್ತು. ಈ ದೃಶ್ಯ ಉಗ್ರರ ಅಟ್ಟಹಾಸಕ್ಕೆ ನಿದರ್ಶನದಂತಿತ್ತು.

ವಿನಯ್ ನರ್ವಾಲ್ ಕೇವಲ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದ್ದರು ಮತ್ತು ಕೊಚ್ಚಿಯಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಕೇವಲ 1 ವಾರದ ಹಿಂದಷ್ಟೇ ಮದುವೆಯಾಗಿದ್ದ 26 ವರ್ಷದ ಹರಿಯಾಣದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ತಮ್ಮ ಪತ್ನಿಯ ಜೊತೆ ಕಾಶ್ಮೀರಕ್ಕೆ ಹನಿಮೂನಿಗೆ ಹೋಗಿದ್ದಾಗ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 23, 2025 05:21 PM