ಪ್ಯಾರಾಲಿಂಪಿಕ್ನಲ್ಲಿ ಚಿನ್ನ ಗೆದ್ದು ತೊಡೆ ತಟ್ಟಿ ಸಂಭ್ರಮಿಸಿದ ನಿತೇಶ್; ವಿಡಿಯೋ ನೋಡಿ
Paralympics 2024: ಐತಿಹಾಸಿಕ ಚಿನ್ನದ ಪದಕದ ಗೆಲುವಿನ ನಂತರ ನಿತೇಶ್ ಕುಮಾರ್ ತಮ್ಮ ಅಂಗಿಯನ್ನು ಕಳಚಿ ಕೋರ್ಟ್ನ ತುಂಬಾ ಓಡಾಡುತ್ತ ಸಂಭ್ರಮಿಸಿದರು. ನಿತೇಶ್ ಜೊತೆಗೆ ಅವರ ಕೋಚ್ಗಳು ಸಹ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಎರಡನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಈ ಪದಕವನ್ನು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ನಿತೀಶ್ ಕುಮಾರ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL3 ಈವೆಂಟ್‌ನಲ್ಲಿ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಿದೆ. ನಿತೇಶ್ ಕುಮಾರ್ ಅವರು ಪ್ಯಾರಾ-ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಈವೆಂಟ್‌ನ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಕೊನೆಗೂ ನಿತೀಶ್ ಕುಮಾರ್ ಗೆಲುವಿನಲ್ಲಿ ಯಶಸ್ವಿಯಾದರು. ಈ ಐತಿಹಾಸಿಕ ಗೆಲುವಿನ ನಂತರ ನಿತೇಶ್ ಕುಮಾರ್ ತಮ್ಮ ಅಂಗಿಯನ್ನು ಕಳಚಿ ಕೋರ್ಟ್ನ ತುಂಬಾ ಓಡಾಡುತ್ತ ಸಂಭ್ರಮಿಸಿದರು. ನಿತೇಶ್ ಜೊತೆಗೆ ಅವರ ಕೋಚ್ಗಳು ಸಹ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ರಬಲ ಪೈಪೋಟಿ
ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಫೈನಲ್‌ನಲ್ಲಿ ಪ್ರಬಲ ಪೈಪೋಟಿ ಕಂಡುಬಂದಿತು. ನಿತೀಶ್ ಕುಮಾರ್ ಮೊದಲ ಸೆಟ್ ಅನ್ನು 21-14 ರಿಂದ ಗೆದ್ದುಕೊಂಡರು. ಒಂದು ಬಾರಿ ಎರಡನೇ ಸೆಟ್‌ನಲ್ಲಿ ಇಬ್ಬರೂ ಆಟಗಾರರು 16-16ರಲ್ಲಿ ಸಮಬಲ ಸಾಧಿಸಿದರು. ಇದಾದ ನಂತರ ಡೇನಿಯಲ್ ಬೆತೆಲ್ ಕಮ್ ಬ್ಯಾಕ್ ಮಾಡಿ 18-21ರಿಂದ ಸೆಟ್ ಗೆದ್ದುಕೊಂಡರು. ಮೂರನೇ ಸೆಟ್‌ನಲ್ಲಿ ಗ್ರೇಟ್ ಬ್ರಿಟನ್ ಆಟಗಾರನಿಗೆ ಯಾವುದೇ ಅವಕಾಶ ನೀಡದ ನಿತೀಶ್ ಕುಮಾರ್ 23-21 ರಿಂದ ಗೆದ್ದರು. ಇದು ನಿತೇಶ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನವಾಗಿದೆ.
ಸೆಮೀಸ್ನಲ್ಲಿ ಸುಲಭ ಜಯ
ಇನ್ನು ನಿತೇಶ್ ಕುಮಾರ್ ಅವರು ಭಾನುವಾರ (ಸೆಪ್ಟೆಂಬರ್ 1) ನಡೆದ ಸೆಮಿಫೈನಲ್‌ನಲ್ಲಿ ಜಪಾನ್‌ನ ಡೈಸುಕೆ ಫುಜಿಹಾರಾ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದರು. 48 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅವರು 21-16 21-12 ರಿಂದ ಜಪಾನ್‌ನ ಡೈಸುಕೆ ಫುಜಿಹಾರ ಅವರನ್ನು ಸೋಲಿಸಿದ್ದರು.