ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಪಾರ್ಶ್ವವಾಯು ಪೀಡಿತ ಪತಿ ಮುಬಾರಕ್‌ನನ್ನು ಪತ್ನಿ ಶಹೀನಾ ಬಾನು, ಆಕೆಯ ತಾಯಿ ಹಸೀನಾ ಬಾನು ಹಾಗೂ ಪ್ರಿಯಕರ ನಯೀಮುದ್ದೀನ್ ಖುರೇಶಿ ಸೇರಿ ಕೊಂದಿದ್ದಾರೆ. ಹೃದಯಾಘಾತದಿಂದ ಸಾವು ಎಂದು ಬಿಂಬಿಸಲು ಯತ್ನಿಸಿದ್ದು, ಆವಲಹಳ್ಳಿ ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ. ಪತಿಯ ಅನಾರೋಗ್ಯ ಮತ್ತು ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಕೊಲೆಗೆ ಪ್ರಮುಖ ಕಾರಣವಾಗಿದೆ.
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರಿನ ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್‌ನಲ್ಲಿ ನಡೆದ ಪತಿ ಮುಬಾರಕ್ ಹತ್ಯೆ ಪ್ರಕರಣದಲ್ಲಿ ಆವಲಹಳ್ಳಿ ಪೊಲೀಸರು ಪತ್ನಿ ಶಹೀನಾ ಬಾನು, ಆಕೆಯ ತಾಯಿ ಹಸೀನಾ ಬಾನು ಮತ್ತು ಪ್ರಿಯಕರ ನಯೀಮುದ್ದೀನ್ ಖುರೇಶಿಯನ್ನು ಬಂಧಿಸಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಂದ ನಂತರ, ಆರೋಪಿಗಳು ಹೃದಯಾಘಾತದಿಂದ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು.
ಕಳೆದ 20 ವರ್ಷಗಳ ಹಿಂದೆ ಮುಬಾರಕ್ ಮತ್ತು ಶಹೀನಾ ಬಾನು ವಿವಾಹವಾಗಿದ್ದರು. ಎರಡು ವರ್ಷಗಳ ಹಿಂದೆ ಮುಬಾರಕ್‌ಗೆ ಪಾರ್ಶ್ವವಾಯು ಬಂದು ಹಾಸಿಗೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಶಹೀನಾ ಬಾನುಗೆ ನಯೀಮುದ್ದೀನ್ ಖುರೇಶಿ ಪರಿಚಯವಾಗಿದ್ದು, ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಪತಿಯನ್ನು ಕೊಲೆ ಮಾಡಿ ಪ್ರಿಯಕರನೊಂದಿಗೆ ಜೀವನ ನಡೆಸುವ ಆಸೆಯಿಂದ ಶಹೀನಾ, ಆಕೆಯ ತಾಯಿ ಹಸೀನಾ ಬಾನು ಮತ್ತು ನಯೀಮುದ್ದೀನ್ ಸೇರಿ ಈ ಕೃತ್ಯ ಎಸಗಿದ್ದಾರೆ. ಸೆಪ್ಟೆಂಬರ್ 9ರ ರಾತ್ರಿ ಮುಬಾರಕ್‌ಗೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟ ನಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
