ಪ್ರಜಾಪ್ರಭುತ್ವ ಜನರಿಂದ ನಡೆಯುತ್ತದೆಯೇ ಹೊರತು ಮಠಾಧೀಶರಿಂದಲ್ಲ ಎಂದ ಮಾಜಿ ಸಚಿವ ಬಿ ಸಿ ಪಾಟೀಲ್

ಮಾಜಿ ಸಚಿವ ಬಿಸಿ ಪಾಟೀಲ ಅವರು ಸೋಮವಾರದಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತಮ್ಮ ಆದ್ಯತೆಯ ಪಕ್ಷ ಮತ್ತು ಪ್ರತಿನಿಧಿಗಳನ್ನು ಆರಿಸುತ್ತಾರೆಯೇ ಹೊರತು ಸ್ವಾಮೀಜಿಗಳಲ್ಲ ಎಂದರು

TV9kannada Web Team

| Edited By: Arun Belly

Aug 03, 2021 | 12:06 AM

ಮಠಾಧೀಶರು ರಾಜಕೀಯದಲ್ಲಿ ಪದೇಪದೆ ಮೂಗು ತೂರುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ದಿನಗಳಿಂದ ಕರ್ನಾಟಕದಲ್ಲಿ ಗಂಭೀರ ಚರ್ಚೆಗಳಾಗುತ್ತಿವೆ. ನಿಮಗೆ ಚೆನ್ನಾಗಿ ಗೊತ್ತಿದೆ, ರಾಜ್ಯದ ಅನೇಕ ಮಠಗಳ ಸ್ವಾಮಿಗಳು ಬಿಎಸ್ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಬೇಕೆಂದು ಸಂಬಂಧಪಟ್ಟವರ ಮೇಲೆ ಒತ್ತಡ ಹೇರುವ ವಿಫಲ ಪ್ರಯತ್ನ ಮಾಡಿದರು. ಅದಾದ ನಂತರ ರಾಜ್ಯದ ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ಸಾಮಾನ್ಯ ಜನತೆ ಸಹ ಮಠಾಧೀಶರು ರಾಜಕೀಯದಿಂದ ದೂರ ಉಳಿಯುವುದೆ ಒಳಿತು ಅಂತ ಹೇಳುತ್ತಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿಸಿ ಪಾಟೀಲ ಅವರು ಸೋಮವಾರದಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತಮ್ಮ ಆದ್ಯತೆಯ ಪಕ್ಷ ಮತ್ತು ಪ್ರತಿನಿಧಿಗಳನ್ನು ಆರಿಸುತ್ತಾರೆಯೇ ಹೊರತು ಸ್ವಾಮೀಜಿಗಳಲ್ಲ ಎಂದರು. ಹಾಗಾಗಿ ಮಠಗಳಮಾನ್ಯಗಳ ಶ್ರೀಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು. ಸ್ವಾಮೀಜಿಗಳ ಭವಿಷ್ಯವಾಣಿ ನಿಜವಾಗುವುದಿಲ್ಲ ಎಂದು ಅವರು ತಮ್ಮ ವೈಯಕ್ತಿಕ ಉದಾಹರಣೆಯನ್ನು ಉಲ್ಲೇಖಿಸಿ ಹೇಳಿದರು. ಒಬ್ಬ ಹೆಸರಾಂತ ಗುರುಗಳು ರಾಜಕೀಯ ಪ್ರವೇಶ ಬೇಡ ಅದರಿಂದ ಒಳ್ಳೆಯದಾಗುವುದಿಲ್ಲ ಮತ್ತು ಯಶ ಸಹ ದಕ್ಕುವುದಿಲ್ಲ ಎಂದು ಮುತ್ಸದ್ದಿ ಹೇಳಿದ್ದರಂತೆ. ಆದರೆ ಅವರ ಭವಿಷ್ಯ ಸುಳ್ಳಾಗಿ ತಾನೊಬ್ಬ ಯಶಸ್ವೀ ರಾಜಕೀಯ ನಾಯಕನಾಗಿರುವುದಾಗಿ ಅವರು ಹೇಳಿದರು.

ಹಾಗೆಯೇ, ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನತಾ ದಳ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪಾಟೀಲ ಹೇಳಿದರು. ದೇವೇಗೌಡರು ನಾಡಿನ ಹಿರಿಯ ಮುತ್ಸದ್ದಿಯಾಗಿದ್ದಾರೆ ಮತ್ತು ಮಾಜಿ ಪ್ರಧಾನ ಮಂತ್ರಿಯೂ ಆಗಿರುವುದರಿಂದ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು ಅತ್ಯಂತ ಸ್ವಾಗತಾರ್ಹ ಎಂದು ಅವರು ಹೇಳಿದರು.

ಇದನ್ನೂ ಓದಿ: ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ: ವಿಡಿಯೋ ವೈರಲ್

Follow us on

Click on your DTH Provider to Add TV9 Kannada