ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ

Updated on: Jul 08, 2025 | 10:21 PM

ಬ್ರೆಸಿಲಿಯಾದಲ್ಲಿರುವ ಅಲ್ವೊರಾಡಾ ಅರಮನೆಯಲ್ಲಿ ನಡೆದ ಔಪಚಾರಿಕ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 114 ಕುದುರೆಗಳ ವಿಶಿಷ್ಟ ಸ್ವಾಗತ ದೊರೆಯಿತು. ಪ್ರಧಾನಿ ಮೋದಿ ಬೊಲಿವಿಯಾ ಮತ್ತು ಉರುಗ್ವೆ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾಕ್ಕೆ ಆಗಮಿಸಿದ ನಂತರ, ಭಾರತದ ಪ್ರಧಾನಿಯವರು ಔಪಚಾರಿಕ ಸ್ವಾಗತ ಸಮಾರಂಭದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆನಂದಿಸಿದರು.

ನವದೆಹಲಿ, ಜುಲೈ 8: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬ್ರೆಜಿಲ್ ಪ್ರವಾಸದಲ್ಲಿದ್ದಾರೆ. ಅವರಿಗೆ ಬ್ರೆಜಿಲ್​ನ ಭಾರತೀಯ ವಲಸಿಗರು ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಸಂಗೀತದ ಮೂಲಕ ಸ್ವಾಗತ ಕೋರಿದರು. ತಮಗೆ ನೀಡಿದ ವಿಶಿಷ್ಟ ಸಾಂಸ್ಕೃತಿಕ ಸ್ವಾಗತಕ್ಕಾಗಿ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತದ ಜೊತೆಗೆ ಬ್ರೆಜಿಲ್‌ನ ಪ್ರದರ್ಶಕರು ಸಾಂಪ್ರದಾಯಿಕ ಸಾಂಬಾ ರೆಗ್ಗೀ ಪ್ರಸ್ತುತಿಯನ್ನು ಪ್ರದರ್ಶಿಸಿದರು. ಬ್ರೆಸಿಲಿಯಾದ ಅಲ್ವೊರಾಡಾ ಅರಮನೆಯಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಶಾಸ್ತ್ರೀಯ ಸಂಗೀತದೊಂದಿಗೆ ಸ್ವಾಗತಿಸಲಾಯಿತು. ಅವರನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಬರಮಾಡಿಕೊಂಡರು.

1968ರ ನಂತರ ಭಾರತೀಯ ಪ್ರಧಾನಿಯೊಬ್ಬರು ಬ್ರೆಜಿಲ್‌ಗೆ ದ್ವಿಪಕ್ಷೀಯ ರಾಜ್ಯ ಭೇಟಿಯನ್ನು ಕೈಗೊಂಡಿರುವುದು ಇದೇ ಮೊದಲು. ಪ್ರಧಾನಿ ಮೋದಿ ಅವರ ಉಪಸ್ಥಿತಿಯು ಭಾರತ-ಬ್ರೆಜಿಲ್ ಸಂಬಂಧಗಳ ಬಲವರ್ಧನೆಯನ್ನು ಎತ್ತಿ ತೋರಿಸುವುದಲ್ಲದೆ, ಲ್ಯಾಟಿನ್ ಅಮೆರಿಕಾದಾದ್ಯಂತ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಬೆಳೆಸುವ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ. ಈ ಭೇಟಿಯು ಎರಡು ಪ್ರಜಾಪ್ರಭುತ್ವಗಳ ನಡುವೆ ವ್ಯಾಪಾರ, ಹೂಡಿಕೆ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ