ಪ್ರವಾಹ ಪೀಡಿತ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ
ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಹಿಮಾಚಲ ಪ್ರದೇಶಕ್ಕೆ ಇಂದು 1,500 ಕೋಟಿ ರೂ.ಗಳ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಿದರು. ಪುನರ್ನಿರ್ಮಾಣ ಮತ್ತು ಪುನಃಸ್ಥಾಪನೆಯಲ್ಲಿ ಕೇಂದ್ರವು ಸಂಪೂರ್ಣ ಬೆಂಬಲವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
ನವದೆಹಲಿ, ಸೆಪ್ಟೆಂಬರ್ 9: ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಹಾನಿಗೊಳಗಾಗಿರುವ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ವೈಮಾನಿಕ ಸಮೀಕ್ಷೆ ನಡೆಸಿದರು. ಹಿಮಾಚಲ ಪ್ರದೇಶಕ್ಕೆ ಪ್ರವಾಹ, ಭೂಕುಸಿತ ಮತ್ತು ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಅವರು ರಾಜ್ಯಕ್ಕೆ 1,500 ಕೋಟಿ ರೂ.ಗಳ ಆರ್ಥಿಕ ನೆರವು ಘೋಷಿಸಿದರು. ಪ್ರಧಾನಿ ಮೊದಲು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡರು. ನಂತರ ಕಾಂಗ್ರಾದಲ್ಲಿ ರಾಜ್ಯ ಅಧಿಕಾರಿಗಳೊಂದಿಗೆ ಹಾನಿ ಮತ್ತು ನಡೆಯುತ್ತಿರುವ ಪರಿಹಾರ ಕ್ರಮಗಳನ್ನು ನಿರ್ಣಯಿಸಲು ಪರಿಶೀಲನಾ ಸಭೆ ನಡೆಸಿದರು. ನಂತರ ಅವರು ಸಾಂತ್ವನ ಹೇಳಲು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದರು. ಬಳಿಕ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಮತ್ತು ಆಪ್ಡಾ ಮಿತ್ರ ಸ್ವಯಂಸೇವಕರ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಜೂನ್ 20ರಿಂದ ಸೆಪ್ಟೆಂಬರ್ 8ರವರೆಗೆ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಂದ 4,100 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ 370 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದಿಂದ 43, ಮೇಘಸ್ಫೋಟದಿಂದ 17 ಮತ್ತು ಪ್ರವಾಹದಲ್ಲಿ 9 ಜನ ಮೃತಪಟ್ಟಿದ್ದಾರೆ. ಕೆಟ್ಟ ಹವಾಮಾನದಿಂದ ಉಂಟಾದ ರಸ್ತೆ ಅಪಘಾತಗಳಲ್ಲಿ ಇನ್ನೂ 165 ಜನರು ಸಾವನ್ನಪ್ಪಿದ್ದಾರೆ. 6,300ಕ್ಕೂ ಹೆಚ್ಚು ಮನೆಗಳು, 461 ಅಂಗಡಿಗಳು ಮತ್ತು ಕಾರ್ಖಾನೆಗಳಿಗೆ ಹಾನಿಯಾಗಿದೆ. ರಾಜ್ಯವು ಇಲ್ಲಿಯವರೆಗೆ 136 ಪ್ರಮುಖ ಭೂಕುಸಿತಗಳು, 95 ಹಠಾತ್ ಪ್ರವಾಹಗಳು ಮತ್ತು 45 ಮೇಘಸ್ಫೋಟಗಳಿಗೆ ಸಾಕ್ಷಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ