Water Metro: ಭಾರತದ ಮೊದಲ ವಾಟರ್ ಮೆಟ್ರೋ ಸೇವೆಗೆ ಕೊಚ್ಚಿಯಲ್ಲಿ ಪ್ರಧಾನಿ ಮೋದಿ ಚಾಲನೆ
ವಿಶಾಲವಾದ ಕಿಟಕಿ ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ವಾಟರ್ ಮೆಟ್ರೋ ಹಿನ್ನೀರಿನ ಸುಂದರ ದೃಶ್ಯಗಳ ಜೊತೆಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಹೆಚ್ಚಿನ ಭದ್ರತೆಯನ್ನೂ ನೀಡಲಾಗಿದೆ. ಈ ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ ₹1,137 ಕೋಟಿ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆಗೆ ಏಪ್ರಿಲ್ 25ರಂದು ಚಾಲನೆ ನೀಡಲಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಮೆಟ್ರೋ ಸಂಪರ್ಕದ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕೆ ವಾಟರ್ ಮೆಟ್ರೋ ವಿಧಾನ ಪ್ರಮುಖ ಉದಾಹರಣೆಯಾಗಿದೆ. ಈ ಯೋಜನೆಯು ಆರ್ಥಿಕಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದೊಂದು ವಿಶಿಷ್ಟವಾದ ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿದ್ದು, ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತೆಯೇ ಅದೇ ಅನುಭವ ಮತ್ತು ಪ್ರಯಾಣದ ಸುಲಭತೆಯನ್ನು ನೀಡಲಿದೆ. ಕೊಚ್ಚಿಯಂತಹ ನಗರಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ. ವಿಶಾಲವಾದ ಕಿಟಕಿ ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ವಾಟರ್ ಮೆಟ್ರೋ ಹಿನ್ನೀರಿನ ಸುಂದರ ದೃಶ್ಯಗಳ ಜೊತೆಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಹೆಚ್ಚಿನ ಭದ್ರತೆಯನ್ನೂ ನೀಡಲಾಗಿದೆ. ಈ ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ ₹1,137 ಕೋಟಿ ಆಗಿದೆ.