ಪೋಕ್ಸೋ ಕೇಸ್: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಇಂದು (ಜೂ.17) ಎರಡನೇ ಬಾರಿಗೆ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ. ಮಾರ್ಚ್ 14ರಂದು ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಬೆಂಗಳೂರು, ಜೂನ್ 17: ಪೋಕ್ಸೋ (POCSO) ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಇಂದು (ಜೂ.17) ಎರಡನೇ ಬಾರಿಗೆ ಸಿಐಡಿ (CID) ವಿಚಾರಣೆಗೆ ಹಾಜರಾಗಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ತನಿಖಾಧಿಕಾರಿ ಪೃಥ್ವಿ, ಎಸ್ಪಿ ಸಾರಾ ಪಾತೀಮಾ ಅವರು ಬಿಎಸ್ ಯಡಿಯೂರಪ್ಪ ಅವರ ವಿಚಾರಣೆ ನಡೆಸುತ್ತಿದ್ದಾರೆ. ಮಾರ್ಚ್ 14ರಂದು ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಸಿಐಡಿಗೆ ವಿಚಾರಣೆಗೆ ಹಾಜರಾಗಿ ಬರುತ್ತೇನೆ ಎಂದರು. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಬೆಲೆ ಏರಿಕೆ ಅಕ್ಷಮ್ಯ ಅಪರಾಧ. ಬೆಲೆ ಏರಿಕೆಯಿಂದ ಸಾಮಾನ್ಯ ಜನ ಬದುಕುವುದು ಕಷ್ಟವಾಗಿದೆ. ಅದು ಗೊತ್ತಿದ್ದೂ ಬೆಲೆ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕಡಿಮೆ ಮಾಡಲಿ ಅಂತ ಹೇಳುವುದನ್ನ ಬಿಡಲಿ ಎಂದು ವಾಗ್ದಾಳಿ ಮಾಡಿದರು.