ಗುಂಡ್ಲುಪೇಟೆಯಲ್ಲಿ ಡಿಜೆ ವಿವಾದ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹನುಮ ಭಕ್ತರ ಆಕ್ರೋಶ
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹನುಮ ಜಯಂತಿ ಶೋಭಾಯಾತ್ರೆ ವೇಳೆ ಡಿಜೆ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮತಿ ಇಲ್ಲದ ಕಾರಣ ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದರೆ, ಅನುಮತಿ ಪಡೆದಿದ್ದೆವು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಭಕ್ತರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ಚಾಮರಾಜನಗರ, ಡಿಸೆಂಬರ್ 28: ಡಿಜೆ ವಾಹನ ವಶಕ್ಕೆ ಪಡೆದ ಪೊಲೀಸರ ನಡೆಗೆ ಆಕ್ರೋಶಗೊಂಡು ಹನುಮ ಭಕ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಹನುಮ ಜಯಂತಿ ಹಿನ್ನೆಲೆ ನಿನ್ನೆ ಸಂಜೆ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರು ಅನುಮತಿ ಪಡೆಯದೆ ಡಿಜೆ ಬಳಸಿದ ಕಾರಣ ಟ್ರ್ಯಾಕ್ಟರ್ ಸಮೇತ ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದರು. ಪೊಲೀಸರು ವಾಹನ ವಶಕ್ಕೆ ಪಡೆಯುತ್ತಿದ್ದಂತೆ ರೊಚ್ಚಿಗೆದ್ದ ಹನುಮ ಭಕ್ತರು, ರಾತ್ರಿ ಗುಂಡ್ಲುಪೇಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮೈಕ್ ಹಾಗೂ ಸೌಂಡ್ ಬಾಕ್ಸ್ ಬಳಸಲು ಅನುಮತಿ ಪಡೆದಿರುವುದಾಗಿ ತಿಳಿಸಿದ್ದು, ರಾಜಕೀಯ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
