ಕಲಬುರಗಿ: ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ನಡುವೆ ಊಟದ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಪರಿಸ್ಥಿತಿ ಬಿಗಡಾಯಿಸಿದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ನಿಯಂತ್ರಣಕ್ಕೆ ತರಲು ನೋಡಿದ್ದಾರೆ. ಆದರೆ, ಪುಂಡ ವಿದ್ಯಾರ್ಥಿಗಳು ಪೊಲೀಸರ ಜತೆಗೇ ವಾಗ್ವಾದ ನಡೆಸಿ ಹಲ್ಲೆ ಮಾಡುವ ಹಂತಕ್ಕೆ ಹೋಗಿದ್ದಾರೆ. ಸಿಟ್ಟಿಗೆದ್ದ ಪೊಲೀಸರು ಲಾಠಿ ಬೀಸಿದ್ದಾರೆ. ವಿಡಿಯೋ ಇಲ್ಲಿದೆ.
ಕಲಬುರಗಿ, ಮಾರ್ಚ್ 8: ವಿದ್ಯಾರ್ಥಿಯನ್ನು ನೆಲಕ್ಕೆ ಹಾಕಿ ಥಳಿಸುತ್ತಿರುವ ಮತ್ತೊಂದು ವಿಧ್ಯಾರ್ಥಿ ಗುಂಪು. ಇತ್ತ ಸ್ಟೂಡೆಂಟ್ಸ್ ಗ್ಯಾಂಗ್ ವಾರ್ನಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ. ಅಂದಹಾಗೆ, ಇಲ್ಲಿ ಈ ವಿಧ್ಯಾರ್ಥಿಗಳ ಮಾರಮಾರಿಗೆ ಕಾರಣವಾಗಿದ್ದು ಊಟದ ವಿಚಾರ. ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ದೇಶದ ನಾನಾ ಭಾಗಗಳಿಂದ ವಿಧ್ಯಾರ್ಥಿಗಳು ಬಂದು ಉನ್ನತ ವ್ಯಾಸಂಗ ಮಾಡುತ್ತಾರೆ. ಆದರೆ, ಅವರಿಗೆ ಇಲ್ಲಿನ ಊಟದ ಶೈಲಿ ವಿಚಾರವಾಗಿ ತಕರಾರು ಇತ್ತು .ವಿವಿಯ ಹಾಸ್ಟೆಲ್ ನಲ್ಲಿ ಉತ್ತರ ಭಾರತದ ವಿಧ್ಯಾರ್ಥಿಗಳು ತಮಗೆ ಮಷೀನ್ನಿಂದ ಮಾಡಿರುವ ಚಪಾತಿ ಬೇಕು ಎಂದು ಹಠ ಹಿಡಿದಿದ್ದರು. ಆದರೆ, ಇದಕ್ಕೆ ವಿರುದ್ದವಾಗಿ ದಕ್ಷಿಣ ಭಾರತದ ವಿಧ್ಯಾರ್ಥಿಗಳು ತಮಗೆ ಕೈಯಾರೆ ತಯಾರಿಸಿರುವ ಚಪಾತಿಯೇ ಬೇಕು ಎಂದು ವಿವಿಯ ಹಾಸ್ಟೆಲ್ನಲ್ಲಿ ಜಿದ್ದಿಗೆ ಬಿದ್ದಿದ್ದರು. ಎರಡೂ ಗುಂಪುಗಳ ಮಧ್ಯ ಶುರುವಾದ ಚಪಾತಿ ಗಲಾಟೆ ಮಾರಮಾರಿಗೆ ತಿರುಗಿತ್ತು .ನೋಡ ನೋಡುತ್ತಲೇ ಎರಡೂ ಗುಂಪುಗಳ ಮಧ್ಯೆ ಹೊಡೆದಾಟವೇ ಶುರುವಾಗಿತ್ತು. ವಿವಿ ಹಾಸ್ಟೆಲ್ನಿಂದ ಶುರುವಾದ ಜಗಳ ಬೀದಿಗೆ ಬಂದಿದ್ದು, ಎರಡೂ ಗುಂಪುಗಳು ಕೈ ಕೈ ಮಿಲಾಯಿಸಿದ್ದವು. ಖುದ್ದು ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತಾಯಿತು. ಸದ್ಯ, ಘಟನೆಯಲ್ಲಿ ಎರಡೂ ಗುಂಪುಗಳ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.