ಪೆನ್​ಡ್ರೈವ್ ವಿಡಿಯೋಗಳ ಇಟ್ಕೊಂಡು ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡುತ್ತಿರುವ ಖತರ್ನಾಕ್ ತಂಡ

|

Updated on: May 01, 2024 | 6:51 PM

Prajwal Revanna scandal, blackmail cases: ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳಲ್ಲಿರುವ ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಘಟನೆ ಹಾಸನದಲ್ಲಿ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದೆ. ಪೆನ್ ಡ್ರೈವ್​ನಲ್ಲಿರುವ ಸಾವಿರಾರು ವಿಡಿಯೋ ಫೋಟೋಗಳಲ್ಲಿ ಕೆಲವು ಮಾತ್ರ ಲೀಕ್ ಆಗಿವೆ. ಉಳಿದ ವಿಡಿಯೋಗಳನ್ನು ಹೊಂದಿರುವವರು ಮಹಿಳೆಯರಿಂದ ಹಣ ವಸೂಲಿಗೆ ನಿಂತಿರಬಹುದು ಎನ್ನಲಾಗುತ್ತಿದೆ.

ಬೆಂಗಳೂರು, ಮೇ 1: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ (Prajwal Revanna sex scandal) ದಂದೆಕೋರರಿಗೆ ಹೊಸ ಆದಾಯ ಕಲ್ಪಿಸಿದಂತಿದೆ. ಲೈಂಗಿಕ ದೌರ್ಜನ್ಯದ ದೃಶ್ಯಗಳಿರುವ ಪೆನ್ ಡ್ರೈವ್ ಲೀಕ್ ಆಗಿದೆ. ಈ ಪೆನ್ ಡ್ರೈವ್​ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿಡಿಯೋ, ಫೋಟೋಗಳು ಇವೆ ಎನ್ನುವ ಮಾತು ಕೇಳಿಬಂದಿದೆ. ಇವುಗಳಲ್ಲಿ ಕೆಲ ಫೋಟೋ ಮತ್ತು ವಿಡಿಯೋ ಹೊರಗೆ ಲೀಕ್ ಆಗಿದ್ದು ಮೊಬೈಲ್​ಗಳಲ್ಲಿ ಶೇರ್ ಆಗುತ್ತಿದೆ. ಅದು ಬಿಟ್ಟು ಪೆನ್ ಡ್ರೈವ್​ನಲ್ಲಿ ಇನ್ನೂ ಬಹಳಷ್ಟು ವಿಡಿಯೋಗಳಿರಬಹುದು ಎನ್ನಲಾಗಿದ್ದು, ಆ ವಿಡಿಯೋಗಳನ್ನು ಹೊಂದಿದವರಲ್ಲಿ ಕೆಲವರು ಬ್ಲ್ಯಾಕ್​ಮೇಲ್​ಗೆ ಇಳಿದಿದ್ದಾರೆ ಎನ್ನುವ ಮಾಹಿತಿ ಕೇಳಿಬಂದಿದೆ.

ಟಿವಿ9 ಕನ್ನಡಕ್ಕೆ ಬಂದಿರುವ ಮಾಹಿತಿ ಪ್ರಕಾರ ದಂದೆಕೋರರ ತಂಡ ಈ ಪೆನ್​ಡ್ರೈವ್​ನ ವಿಡಿಯೋ ಮತ್ತು ಫೋಟೋದಲ್ಲಿರುವ ಮಹಿಳೆಯರನ್ನು ಸಂಪರ್ಕಿಸಿ ಬ್ಲ್ಯಾಕ್​ಮೇಲ್ ಮಾಡಿ ಹಣ ವಸೂಲಾತಿಗೆ ನಿಂತಿವೆ. ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಈ ದಂದೆ ನಡೆಯುತ್ತಿದ್ದು ಕೆಲ ಮಹಿಳೆಯರು ಈ ದಂದೆಕೋರರಿಗೆ ಹಣವನ್ನೂ ಕೊಟ್ಟಿರಬಹುದು ಎನ್ನಲಾಗಿದೆ.

ಚುನಾವಣೆಗೆ ಕೆಲ ದಿನಗಳ ಮುನ್ನ ಈ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿತ್ತು. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳು ಈ ಪೆನ್​ಡ್ರೈವ್​ನಲ್ಲಿ ಇವೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಬಳಿ ಈ ಪೆನ್ ಡ್ರೈವ್ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಎಚ್ ಡಿ ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಪ್ರಕರಣದ ರೂವಾರಿ ಎಂದು ಡಿಕೆಶಿಯತ್ತ ಬೊಟ್ಟು ಮಾಡಿದ್ದಾರೆ. ರೇವಣ್ಣರ ಕಾರ್ ಡ್ರೈವರ್ ಆದ ಕಾರ್ತಿಕ್ ಈ ಪೆನ್ ಡ್ರೈವ್ ಅನ್ನು ಹೊಳೆನರಸೀಪುರದ ಬಿಜೆಪಿ ನಾಯಕ ದೇವರಾಜೇಗೌಡರಿಗೆ ಕೊಟ್ಟಿದ್ದೆನೆಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಪ್ರಕರಣ: ಒಂದು ಹೆಸರು ಎಚ್​ಡಿಕೆ ಹೇಳವ್ರೆ, ಇನ್ನೊಂದು ನಾನ್ ಹೇಳ್ತೀನಿ ಎಂದ ಯತ್ನಾಳ್

ಇದೇ ವೇಳೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿದ್ದಾರೆ. ತನ್ನದೇನೂ ತಪ್ಪಿಲ್ಲ ಎಂದು ಹೇಳಿರುವ ಪ್ರಜ್ವಲ್, ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಬರುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: May 01, 2024 06:50 PM