ಶೀಘ್ರದಲ್ಲೇ ಮತ್ತೊಂದು ಸಿಡಿ, ಹೊಸ ಬಾಂಬ್ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

|

Updated on: May 07, 2024 | 10:36 AM

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್​​ಐಟಿ ಸಂಪೂರ್ಣವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಧೀನದಲ್ಲಿದೆ. ಅವರು ಹೇಳಿದಂತೆ ಕೆಲಸ ಮಾಡುತ್ತದೆ. ಹೀಗಾಗಿ ಅದರ ಮೇಲೆ ವಿಶ್ವಾಸ ಇಡಲಾಗದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಜತೆಗೆ, ಶೀಘ್ರದಲ್ಲೇ ಇನ್ನೊಂದು ಸಿಡಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

ವಿಜಯಪುರ, ಮೇ 7: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದ ಚರ್ಚೆ ದೇಶದಾದ್ಯಂತ ನಡೆಯುತ್ತಿರುವ ಬೆನ್ನಲ್ಲೇ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದು ಯಾರಿಗೆ ಸಂಬಂಧಿಸಿದ್ದು, ಯಾರು ಮಾಡುತ್ತಿದ್ದಾರೆ ಇತ್ಯಾದಿ ಯಾವ ವಿವರವನ್ನೂ ಅವರು ಬಹಿರಂಗಪಡಿಸಿಲ್ಲ.

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಮತ ಚಲಾಯಿಸಿ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದರು. ಸೋಮವಾರ ವಕೀಲ, ಬಿಜೆಪಿ ನಾಯಕ ದೇವೇರಾಜೇ ಗೌಡರು ಆರೋಪಿಸಿದಂತೆ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇರುವುದು ಸ್ಪಷ್ಟ ಎಂದು ಹೇಳಿದರು.

ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್​​ಐಟಿ ಸಂಪೂರ್ಣವಾಗಿ ಡಿಕೆ ಶಿವಕುಮಾರ್ ವಶದಲ್ಲಿದೆ. ಅವರ ಆಣತಿಯಂತೆ ಕೆಲಸ ಮಾಡುತ್ತದೆ ಎಂದು ಯತ್ನಾಳ್ ದೂರಿದರು.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಮೊದಲ ಬಾರಿ ಮಾತನಾಡಿದ ಮೋದಿ, ಹೇಳಿದ್ದೇನು?

ಚುನಾವಣೆ ಮೇಲೆ ಪ್ರಭಾವ ಬೀರಲ್ಲ: ಯತ್ನಾಳ್

ಪ್ರಜ್ವಲ್ ಪ್ರಕರಣ ಉತ್ತರ ಕರ್ನಾಟಕ ಭಾಗದ ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರಲ್ಲ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ 2019ರ ಚುನಾವಣೆಯಲ್ಲಿಯೂ ನಾವು ಉತ್ತಮ ಸಾಧನೆ ಮಾಡಿದ್ದೆವು. ಈ ಭಾಗದಲ್ಲಿ ಜೆಡಿಎಸ್​​ ಅಷ್ಟು ಪ್ರಬಲವಾಗಿಲ್ಲ. ಈ ಎಲ್ಲ ಕಾರಣಗಳಿಂದ ಪ್ರಜ್ವಲ್ ಪ್ರಕರಣದಿಂದ ಈ ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ