VIDEO: ಮತ್ತೆ ವಿವಾದ … ಔಟಾದ ಬಳಿಕ ಬೌಲರ್ಗೆ ಬ್ಯಾಟ್ನಲ್ಲಿ ಹೊಡೆದ ಪೃಥ್ವಿ ಶಾ
Prithvi Shaw: ಪೃಥ್ವಿ ಶಾ ಈ ಹಿಂದೆ ಟೀಮ್ ಇಂಡಿಯಾ ಪರ 12 ಪಂದ್ಯಗಳನ್ನಾಡಿದ್ದರು. ಅದರಲ್ಲೂ ಭಾರತದ ಪರ 5 ಟೆಸ್ಟ್ ಪಂದ್ಯಗಳಲ್ಲಿ 9 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ 339 ರನ್ ಕಲೆಹಾಕಿದ್ದರು. ಇನ್ನು 6 ಏಕದಿನ ಪಂದ್ಯಗಳಿಂದ 189 ರನ್ ಗಳಿಸಿದ್ದರು. ಹಾಗೆಯೇ ಟೀಮ್ ಇಂಡಿಯಾ ಪರ 1 ಟಿ20 ಪಂದ್ಯದಲ್ಲಿ ಬ್ಯಾಟ್ ಬೀಸಿದ್ದ ಪೃಥ್ವಿ ಶೂನ್ಯಕ್ಕೆ ಔಟಾಗಿದ್ದರು.
ಸದಾ ಒಂದಲ್ಲ ಒಂದು ವಿವಾದೊಂದಿಗೆ ಸುದ್ದಿಯಲ್ಲಿರುವ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದು ಸಹ ಆಟಗಾರನೊಬ್ಬನಿಗೆ ಬ್ಯಾಟ್ನಲ್ಲಿ ಹೊಡೆಯುವ ಮೂಲಕ. ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ ಪೃಥ್ವಿ ಶಾ 220 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್ಗಳೊಂದಿಗೆ 181 ರನ್ ಬಾರಿಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಸರ್ಫರಾಝ್ ಖಾನ್ ಸಹೋದರ ಮುಶೀರ್ ಖಾನ್ ಪೃಥ್ವಿ ಶಾ ವಿಕೆಟ್ ಕಬಳಿಸಿದರು.
ಪ್ರಮುಖ ಆಟಗಾರನ ವಿಕೆಟ್ ಸಿಗುತ್ತಿದ್ದಂತೆ ಮುಶೀರ್ ಖಾನ್ ಸಂಭ್ರಮಿಸಿದ್ದಾರೆ. ಇದರಿಂದ ಕೋಪಗೊಂಡ ಪೃಥ್ವಿ ಶಾ ಯುವ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅತ್ತ ಮುಶೀರ್ ಖಾನ್ ಸಹ ಆಟಗಾರರತ್ತ ಸಾಗಿದರೂ ಹಿಂಬಾಲಿಸಿದ ಪೃಥ್ವಿ ಬ್ಯಾಟ್ನಿಂದ ದಾಳಿ ಮಾಡಲು ಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಷ್ಟೇ ಅಲ್ಲದೆ ಮುಶೀರ್ ಖಾನ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸಹ ಆಟಗಾರರು ಹಾಗೂ ಅಂಪೈರ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ಮತ್ತೋರ್ವ ಮುಂಬೈ ಆಟಗಾರ ಕೂಡ ಪೃಥ್ವಿ ಶಾ ಜೊತೆ ವಾಕ್ಸಮರಕ್ಕೆ ಇಳಿದಿರುವುದು ವಿಡಿಯೋದಲ್ಲಿ ಕಾಣಬಹುದು.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭ್ಯಾಸ ಪಂದ್ಯದಲ್ಲೇ ಆಕ್ರಮಣಕಾರಿಯಾಗಿ ವರ್ತಿಸಿರುವ ಪೃಥ್ವಿ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸದಾ ಒಂದಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುತ್ತಿದ್ದ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

