“ಬೇಕಾದರೆ ಆರ್‌ಎಸ್‌ಎಸ್‌ನ ನೊಂದಣಿ ಶುಲ್ಕವನ್ನು ನಾನೇ ಕಟ್ಟುತ್ತೇನೆ”: ಸಚಿವ ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ಸಂಘಟನೆ ನೋಂದಣಿಯಾಗಿಲ್ಲ, ಹಾಗಾಗಿ ಅದರ ವಿರುದ್ಧ ಪ್ರಕರಣಗಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಆರ್‌ಎಸ್‌ಎಸ್ ಕಾನೂನಾತ್ಮಕವಾಗಿ ನೋಂದಣಿಯಾಗಬೇಕು ಎಂದು ಸವಾಲು ಹಾಕಿ, ನೋಂದಣಿ ಶುಲ್ಕವನ್ನು ನಾನೇ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಪ್ರಭಾವಿ ನಾಯಕರು ಸದಸ್ಯರಾಗಿದ್ದರೂ, ಆರ್‌ಎಸ್‌ಎಸ್ ನೋಂದಣಿಗೆ ಹಿಂಜರಿಯುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರು, ಆ.27: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನೋಂದಣಿಯಾಗದ ಸಂಘಟನೆ ಎಂದು ಪುನರುಚ್ಚರಿಸಿದ್ದಾರೆ. ಯಾವುದೇ ಪ್ರಕರಣಗಳ ಪಟ್ಟಿಯನ್ನು ಕೇಳಿದಾಗ ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ ಎಂದು ಹೇಳಿರುವುದಕ್ಕೆ, ಸಂಘಟನೆಗೆ ನೋಂದಣಿ ಇಲ್ಲದಿರುವುದೇ ಕಾರಣ ಎಂದು ವಿವರಿಸಿದರು. “ಆರ್‌ಎಸ್‌ಎಸ್ ನೋಂದಣಿಯೇ ಇಲ್ಲ. ಹಾಗಾಗಿ ನಾನ್ಯಾಕೆ ಬ್ಯಾನ್ ಮಾಡಲಿ? ಕಾನೂನಾತ್ಮಕವಾಗಿ ಬನ್ನಿ, ಕಮ್ ವಿಥಿನ್ ದಿ ಲೀಗಲ್ ಫ್ರೇಮ್ ವರ್ಕ್. ನೀವೇನು ಎಲ್ಲರಿಗಿಂತ ದೊಡ್ಡವರಲ್ಲ” ಎಂದು ಖರ್ಗೆ ಹೇಳಿದರು. “ದಯವಿಟ್ಟು ನೊಂದಣಿ ಮಾಡಿಸಿ. ನಿಮ್ಮ ನೊಂದಣಿ ಶುಲ್ಕವನ್ನು ನಾನೇ ಕಟ್ಟುತ್ತೇನೆ” ಎಂದು ಹೇಳಿ ಆರ್‌ಎಸ್‌ಎಸ್‌ಗೆ ಸವಾಲೆಸೆದರು. ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಆರ್‌ಎಸ್‌ಎಸ್ ಶಾಖೆಗಳ ನೋಂದಣಿ ಶುಲ್ಕವನ್ನು ತಮ್ಮ ಶಾಸಕರ ಅನುದಾನದಿಂದ ಅಥವಾ ಸಂಬಳದಿಂದ ಕಟ್ಟುವುದಾಗಿ, ಬೇಕಿದ್ದರೆ ರಾಷ್ಟ್ರಾದ್ಯಂತದ ನೋಂದಣಿಗೂ ನೆರವು ನೀಡುವುದಾಗಿ ಅವರು ಪ್ರಸ್ತಾಪಿಸಿದರು. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ, ಅಶೋಕ್ ಅವರಂತಹ ಪ್ರಭಾವಿ ನಾಯಕರು ಆರ್‌ಎಸ್‌ಎಸ್‌ನ ಪ್ರಚಾರಕರು ಅಥವಾ ಸದಸ್ಯರಾಗಿದ್ದರೂ, ಸಂಘಟನೆ ನೋಂದಣಿಯಿಂದ ಯಾಕೆ ಹಿಂಜರಿಯುತ್ತಿದೆ ಎಂದು ಖರ್ಗೆ ಪ್ರಶ್ನಿಸಿದರು. ಬಿಜೆಪಿ ನಾಯಕರು ತಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಿರುವುದನ್ನು ಖಂಡಿಸಿ, ತಮ್ಮ ಹೇಳಿಕೆಗಳು ಅಪ್ರಸ್ತುತವಾಗಿದ್ದರೆ ಉತ್ತರ ಏಕೆ ನೀಡಬೇಕು ಎಂದು ಹೇಳಿದರು. ಕ್ರಿಮಿನಲ್ ಡಿಫಮೇಷನ್ ಕೇಸ್ ಹಾಕಿಸಿದ್ದರೂ, ಕೋರ್ಟಿನಲ್ಲಿ ಉತ್ತರ ನೀಡಲು ಸಿದ್ಧ ಎಂದು ಖರ್ಗೆ ಸ್ಪಷ್ಟಪಡಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
