‘ನಾನು ಗ್ರಾಫಿಕ್ ಡಿಸೈನರ್, ಮೋದಿಗಿಂತ ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಂಗೆ’: ಪ್ರಿಯಾಂಕ್ ಖರ್ಗೆ

Edited By:

Updated on: Nov 06, 2026 | 12:22 PM

ಶೈಕ್ಷಣಿಕ ಅರ್ಹತೆ ಕುರಿತು ಪ್ರಶ್ನಿಸಿದ ಛಲುವಾದಿ ನಾರಾಯಣಸ್ವಾಮಿ ಹಾಗೂ ಇತರರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ತಮ್ಮ ವಿದ್ಯಾರ್ಹತೆಯನ್ನು ಪ್ರಧಾನಿ ಮೋದಿ ಅವರೊಂದಿಗೆ ಹೋಲಿಸಿ, ತಾವು ಹೆಚ್ಚು ಅರ್ಹತೆ ಹೊಂದಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಮೋದಿ ಪದವಿ ಬಗ್ಗೆ ಆರ್​ಟಿಐನಲ್ಲಿ ಮಾಹಿತಿ ಸಿಗುತ್ತಿಲ್ಲ ಎಂದಿದ್ದು, ಕಾನ್ವೆಂಟ್ ದಲಿತ ಎಂಬ ಹೇಳಿಕೆಗೂ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ನವೆಂಬರ್ 6: ಶೈಕ್ಷಣಿಕ ಅರ್ಹತೆ ವಿಚಾರವಾಗಿ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿದ್ಯಾರ್ಹತೆ ಕುರಿತು ಚರ್ಚಿಸಲು ಸಿದ್ಧರಿರುವುದಾಗಿ ಅವರು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರದ ಬಗ್ಗೆ ಆರ್​ಟಿಐ ಮೂಲಕವೂ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ತಾವು ಮೋದಿ ಅವರಿಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿದ್ದೇನೆ ಹಾಗೂ ಉತ್ತಮ ಇಂಗ್ಲಿಷ್ ಮಾತನಾಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ತಾವು‘ಗ್ರಾಫಿಕ್ ಡಿಸೈನರ್’ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ‘‘ಕಾನ್ವೆಂಟ್ ದಲಿತ’’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರೋಪಿಸಿದವರ ನಾಯಕರ ಮಕ್ಕಳೇ ಕಾನ್ವೆಂಟ್ ಶಾಲೆಗೆ ಹೋಗಿದ್ದಾರೆಯೇ ಹೊರತು ತಾವು ಅದಮಾರು ಮಠ ಶಾಲೆಯಲ್ಲಿ ಓದಿದವರು ಎಂದು ಸ್ಪಷ್ಟಪಡಿಸಿದ್ದಾರೆ. ನಾರಾಯಣಸ್ವಾಮಿ ಅವರು ಯಾವುದೇ ಭಾಷೆ, ಯಾವುದೇ ವಿಷಯದ ಕುರಿತು ಯಾವುದೇ ಸಮಯದಲ್ಲಿ ಚರ್ಚೆಗೆ ಬರಬಹುದು ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ, ವಂದೇ ಮಾತರಂ ಕುರಿತು ತಮ್ಮ ಜ್ಞಾನದ ಮಿತಿ ಒಪ್ಪಿಕೊಂಡ ಪ್ರಿಯಾಂಕ್ ಖರ್ಗೆ, ಇತರರ ಸಾಮರ್ಥ್ಯವನ್ನೂ ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ‘‘ಹಳ್ಳಿ ಗುಗ್ಗು’’ ಎಂದು ಕರೆದಿದ್ದಕ್ಕೆ ಕ್ಷಮೆಯಾಚಿಸಬೇಕೆಂಬ ಬಿಜೆಪಿ ನಾಯಕ ಎನ್. ರವಿಕುಮಾರ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ರವಿಕುಮಾರ್ ಅವರು ಕೋಟ್ಯಾಂತರ ಜನರನ್ನು ಪ್ರತಿನಿಧಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​