ಹೆಸರು ಪ್ರಸ್ತಾಪವಾದರೆ ಕ್ರಿಮಿನಲ್ ಆಗಲ್ಲ: ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಫಸ್ಟ್ ರಿಯಾಕ್ಷನ್

Updated on: Jun 12, 2026 | 2:03 PM

ಧರ್ಮಸ್ಥಳ ಪ್ರಕರಣದ ಬುರುಡೆ ಗ್ಯಾಂಗ್‌ಗೆ ಸಂಬಂಧಿಸಿದ ಚಿನ್ನಯ್ಯ ರಿಟ್ ಅರ್ಜಿ ಕುರಿತು ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯವು ಎಸ್‌ಐಟಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಎಸ್‌ಐಟಿ ಮುಖ್ಯಸ್ಥರು ನ್ಯಾಯಾಲಯಕ್ಕೆ ಉತ್ತರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರಕಾಶ್ ರಾಜ್ ಕುರಿತು ಚಿನ್ನಯ್ಯನ ಹೇಳಿಕೆಗಳ ಸತ್ಯಾಸತ್ಯತೆ ಮತ್ತು 200 ಕೋಟಿ ರೂಪಾಯಿ ಆರೋಪದ ಕುರಿತು ಪರಿಶೀಲನೆ ಅಗತ್ಯವಿದೆ ಎಂದು ಖರ್ಗೆ ಹೇಳಿದ್ದಾರೆ.

ಬೆಂಗಳೂರು, ಜೂನ್ 12: ಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣಕ್ಕೆ ಸಂಬಂಧಿಸಿ ಮಾಸ್ಕ್​ಮ್ಯಾನ್ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖವಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಬಗ್ಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿದ್ದು, ಚಿನ್ನಯ್ಯನ ಮಾತಿನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ. ಎಷ್ಟು ಸತ್ಯ ಹೇಳುತ್ತಿದ್ದಾರೆ, ಎಷ್ಟು ಸುಳ್ಳಿದೆ ಗೊತ್ತಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಪ್ರಕರಣವು ನ್ಯಾಯಾಲಯದಲ್ಲಿದ್ದು, ವಿಶೇಷ ತನಿಖಾ ದಳ (ಎಸ್ಐಟಿ)ಗೆ ಕೋರ್ಟ್ ಕೆಲವು ಪ್ರಶ್ನೆಗಳನ್ನು ಕೇಳಿದೆ. ಎಸ್ಐಟಿ ಮುಖ್ಯಸ್ಥರು ಆ ಪ್ರಶ್ನೆಗಳಿಗೆ ನ್ಯಾಯಾಲಯಕ್ಕೆ ಉತ್ತರ ನೀಡುತ್ತಾರೆ. ಅದನ್ನು ನಾವು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯಕ್ಕೆ ಉತ್ತರ ನೀಡಿದ ಬಳಿಕ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಮತ್ತು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಮಾಹಿತಿ ಪ್ರಕಾರ 200 ಕೋಟಿ ರೂಪಾಯಿಗಳ ಆರೋಪದ ಕುರಿತು ಪ್ರಸ್ತಾಪವಾಗಿದೆ. ಇದು ಸಣ್ಣ ಮೊತ್ತವಲ್ಲ. ಆದರೆ ಅದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ” ಎಂದು ಖರ್ಗೆ ಹೇಳಿದ್ದಾರೆ. ಅದೇ ವ್ಯಕ್ತಿ (ಚಿನ್ನಯ್ಯ) ಹಿಂದಿನ ಮತ್ತು ಈಗಿನ ಈ ಎಲ್ಲ ಹೇಳಿಕೆಗಳನ್ನು ನೀಡಿರುವುದರಿಂದ, ಅವುಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಯಾವುದೇ ಹೆಸರು ಪ್ರಸ್ತಾಪವಾದ ತಕ್ಷಣವೇ ಎಲ್ಲರೂ ಕ್ರಿಮಿನಲ್‌ಗಳಲ್ಲ. ಎಸ್ಐಟಿ ಮುಖ್ಯಸ್ಥರು ಮೊದಲು ನ್ಯಾಯಾಲಯಕ್ಕೆ ಉತ್ತರ ನೀಡಬೇಕು. ಆ ಬಗ್ಗೆ ಮಾಧ್ಯಮದಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 12, 2026 12:52 PM
Follow Us