ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ, ಕೋಟೆ ಸರ್ಕಲ್‌ನಲ್ಲಿ ಅಳವಡಿಸಿದ್ದ ಅಕ್ರಮ ಬ್ಯಾನರ್ ತೆರವುಗೊಳಿಸಿದ ನಗರಸಭೆ ಪೌರಾಯುಕ್ತ ಅಮೃತಾಗೌಡರಿಗೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರ ದೂರು ಆಧರಿಸಿ ತೆಗೆದಿದ್ದ ಬ್ಯಾನರ್‌ಗಾಗಿ ರಾಜೀವ್ ಗೌಡರ ವರ್ತನೆ ಖಂಡಿಸಿ ಶಿಡ್ಲಘಟ್ಟ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ, ಜನವರಿ 16: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ ಕೋಟೆ ಸರ್ಕಲ್‌ನಲ್ಲಿ ಅಳವಡಿಸಿದ್ದ ಅಕ್ರಮ ಬ್ಯಾನರ್ ತೆರವುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಒಂದು ಚಲನಚಿತ್ರದ ಪ್ರಮೋಷನ್‌ಗಾಗಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಈ ಬ್ಯಾನರ್‌ನಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಗಾಳಿಗೆ ಅದು ಬೈಕ್ ಸವಾರರ ಮುಖಕ್ಕೆ ಅಪ್ಪಳಿಸಿ ಗಾಯಗೊಳಿಸುವ ಸಾಧ್ಯತೆಯೂ ಇತ್ತು ಎಂದು ಸ್ಥಳೀಯರು ಮತ್ತು ನಗರಸಭೆ ಸಿಬ್ಬಂದಿ ತಿಳಿಸಿದ್ದಾರೆ.
ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರ ಸೂಚನೆ ಮೇರೆಗೆ ಸಿಬ್ಬಂದಿ ಬ್ಯಾನರ್ ಅನ್ನು ತೆರವುಗೊಳಿಸಿದ್ದರು. ಈ ಕ್ರಮದಿಂದ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಆಕ್ರೋಶಗೊಂಡಿದ್ದು, ಪೌರಾಯುಕ್ತ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕದ್ದರು ಎಂದು ಆರೋಪಿಸಲಾಗಿದೆ. ಈ ಘಟನೆಯು ಶಿಡ್ಲಘಟ್ಟದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜೀವ್ ಗೌಡರ ವರ್ತನೆಯನ್ನು ಜನ ಖಂಡಿಸಿದ್ದಾರೆ.
