ಪುನೀತ್ ಸರ್ ಒಬ್ಬ ಕಲಾವಿದನಿಗಿಂತ ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿದ್ದರು, ಅವರಂಥವರು ನಮಗೆ ಪುನಃ ಸಿಗಲಾರರು: ಮಂಗ್ಲಿ
ಒಬ್ಬ ಕಲಾವಿದನಿಗಿಂತ ಜಾಸ್ತಿ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದರು. ಅವರೆಲ್ಲೇ ಇರಲಿ, ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಎಂದು ಮಂಗ್ಲಿ ಹೇಳಿದರು.
ಮಂಗ್ಲಿ ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ದೊಡ್ಡ ಹೆಸರು. ಅವರ ಹಾಡುಗಳಿಗೆ ಜನ ಫಿದಾ ಆಗುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಮಂಗ್ಲಿ ಅವರು ಹಾಡಿದ ಕಣ್ಣೇ ಅದುರಿಂದೆ… ಹಾಡನ್ನು ದಕ್ಷಿಣ ಭಾರತದಲ್ಲಿ ಕೇಳದವರೇ ಇರಲಿಕ್ಕಿಲ್ಲ. ನಿಸ್ಸಂದೇಹವಾಗಿ ಸುಶ್ರಾವ್ಯ ಕಂಠಸಿರಿಯ ಒಡತಿ ಮಂಗ್ಲಿ. ಯಾವುದೋ ಕೆಸಲದ ನಿಮಿತ್ತ ಶನಿವಾರ ಅವರು ಬೆಂಗಳೂರಿಗೆ ಆಗಮಿಸಿದ್ದರು. ವೇದಿಕೆ ಮೇಲೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಭಾವುಕರಾಗಿ ಮಾತಾಡಿದ ನಂತರ ಅವರು ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಜೊತೆ ಒಂದು ಚಿಕ್ಕ ಮಾತಕತೆ ನಡೆಸಿದರು. ಮಂಗ್ಲಿಗೆ ಕನ್ನಡ ಬರುವುದಿಲ್ಲವಾದ್ದರಿಂದ ಜಗ್ಗಿನ್ ಇಂಗ್ಲಿಷ್ ಭಾಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ತೆಲುಗಿನಲ್ಲಿ ಉತ್ತರಿಸಿದರು.
ಪುನೀತ್ ಬಹಳ ದೊಡ್ಡ ಸ್ಟಾರ್ ಅವರ ಕುರಿತು ಮಾತಾಡುವ ಯೋಗ್ಯತೆ ತನಗಿಲ್ಲ ಅಂತ ಮಾತು ಆರಂಭಿಸಿದ ಮಂಗ್ಲಿ, ಪುನೀತ್ ಅವರನ್ನು ಜನರೆಲ್ಲ ಅಪ್ಪು ಅಂತ ಕರೆಯೋದು ಗೊತ್ತಿರಲಿಲ್ಲ, ತನಗೆ ಪುನೀತ್ ರಾಜಕುಮಾರ ಅಂತ ಮಾತ್ರ ಗೊತ್ತು. ತೆಲುಗಿಗೆ ಡಬ್ ಆದ ಅವರ ಚಿತ್ರಗಳನ್ನು ನೋಡಿದ್ದಾಗಿ ಹೇಳಿದ ಅವರು, ಪುನೀತ್ ಒಬ್ಬ ಗುಣವಂತರಾಗಿದ್ದರು. ಮೇರು ವ್ಯಕ್ತಿತ್ವ ಅವರದ್ದು, ಅವರಂಥ ವ್ಯಕ್ತಿಯನ್ನು ಪುನಃ ನೋಡಲಾಗದು.
ಒಬ್ಬ ಕಲಾವಿದನಿಗಿಂತ ಜಾಸ್ತಿ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದರು. ಅವರೆಲ್ಲೇ ಇರಲಿ, ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಎಂದು ಮಂಗ್ಲಿ ಹೇಳಿದರು.
ಅವರ ನಿಧನದ ವಾರ್ತೆ ಸಿಕ್ಕಾಗ ತಾನು ಹಾಡಿನ ರೆಕಾರ್ಡಿಂಗ್ನಲ್ಲಿದ್ದೆ, ಸುದ್ದಿ ಕಿವಿಗೆ ಬಿದ್ದಾಕ್ಷಣ ಶಾಕ್ ಆಯಿತು, ಮೊದಲಿಗೆ ಅದನ್ನು ನಂಬಲಾಗಲಿಲ್ಲ. ಆದರೆ, ಟಿವಿ9 ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಿದ್ದು ನೋಡಿದ ನಂತರ ಇದು ನಂಬಲಾಗದ ಸತ್ಯ ಅನ್ನೋದು ಮನವರಿಕೆ ಆಯಿತು ಎಂದು ಮಂಗ್ಲಿ ಹೇಳಿದರು.