ಒಂದು ಮನೆಯಂತಿರುವ ಚಿತ್ರರಂಗ ಅಪ್ಪು ಅವರನ್ನು ಕಳೆದುಕೊಂಡು ಬಾಗಿಲೇ ಇಲ್ಲದ ಮನೆಯಂತಾಗಿದೆ: ಡಾ ವಿ ನಾಗೇಂದ್ರ ಪ್ರಸಾದ್

ಒಂದು ಮನೆಯಂತಿರುವ ಚಿತ್ರರಂಗ ಅಪ್ಪು ಅವರನ್ನು ಕಳೆದುಕೊಂಡು ಬಾಗಿಲೇ ಇಲ್ಲದ ಮನೆಯಂತಾಗಿದೆ: ಡಾ ವಿ ನಾಗೇಂದ್ರ ಪ್ರಸಾದ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2021 | 9:27 PM

‘ಬಾಂಧವ್ಯಗಳು ಮತ್ತು ಸಂಬಂಧಗಳು ಇರುವವರೆಗೆ ಅಪ್ಪುಗೆಗಳಿರುತ್ತವೆ ಮತ್ತು ಎಲ್ಲಿಯವರೆಗೆ ಅಪ್ಪುಗೆಗಳಿರುತ್ತವೆಯೋ ಅಲ್ಲಿವರೆಗೆ ‘ಅಪ್ಪು’ ಇರುತ್ತಾರೆ,’ ಎಂದು ಪ್ರಸಾದ್ ಹೇಳಿದರು.

ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರ, ಚಿತ್ರ ಸಾಹಿತಿ ಮತ್ತು ನಿರ್ದೇಶಕ ಡಾ ವಿ ನಾಗೇಂದ್ರ ಪ್ರಸಾದ್ ಒಂದು ದೊಡ್ಡ ಹೆಸರು. ಪ್ರಸಾದ್ ಅವರು ಡಾ ರಾಜ್ ಕುಟುಂಬದ ಒಡನಾಡಿ ಮತ್ತು ಪುನೀತ್ ರಾಜಕುಮಾರ್ ಅವರ ಬಗ್ಗೆ ಅತೀವ ಅಭಿಮಾನ ಇಟ್ಟುಕೊಂಡವರು. ಟಿವಿ9 ಡಿಜಿಟಲ್ ಎಡಿಟೋರಿಯಲ್ ವರದಿಗಾರ್ತಿಯೊಂದಿಗೆ ಸೋಮವಾರ ಮಾತಾಡಿದ ಪ್ರಸಾದ್ ಅವರು ಅಪ್ಪು ಬಗ್ಗೆ ತಮ್ಮ ಅಂತರಾಳವನ್ನು ತೆರೆದಿಟ್ಟರು. ಅವರು ಹೇಳುವ ಹಾಗೆ ಪುನೀತ್ ಅವರಿಗೆ ಡಾ ರಾಜ್ ಅವರ ಮಗನಾಗಿದ್ದರೂ ತಮ್ಮದೇ ಆದ ಐಡೆಂಟಿಟಿಯನ್ನು ಸ್ಥಾಪಿಸುವ ಛಲವಿತ್ತಂತೆ, ಆ ಛಲದ ಫಲವಾಗಿಯೇ ಅವರು ಅತ್ಯುತ್ತಮ ನಟ ಮತ್ತು ಡ್ಯಾನ್ಸರ್ ಆಗಿ ಗುರುತಿಸಿಕೊಂಡರು. ಅಣ್ಣಾವ್ರ ಮಗನಾಗಿ ಹುಟ್ಟಿದ್ದು ತನ್ನ ಅದೃಷ್ಟ ಆದರೆ ಹಾಗೆ ಕರೆಸಿಕೊಳ್ಳಲು ಅರ್ಹತೆ ಸಂಪಾದಿಸಿಕೊಳ್ಳಬೇಕು ಅಂತ ಅವರು ಹೇಳಿದ್ದರಂತೆ.

ಪುನೀತ್ ಬಗ್ಗೆ ತಮ್ಮ ಅನಿಸಿಕೆಯನ್ನು ಪ್ರಸಾದ್ ಅವರು ಬಹಳ ಅದ್ಭುತವಾಗಿ ಹಂಚಿಕೊಂಡಿದ್ದಾರೆ. ‘ಬಾಂಧವ್ಯಗಳು ಮತ್ತು ಸಂಬಂಧಗಳು ಇರುವವರೆಗೆ ಅಪ್ಪುಗೆಗಳಿರುತ್ತವೆ ಮತ್ತು ಎಲ್ಲಿಯವರೆಗೆ ಅಪ್ಪುಗೆಗಳಿರುತ್ತವೆಯೋ ಅಲ್ಲಿವರೆಗೆ ‘ಅಪ್ಪು’ ಇರುತ್ತಾರೆ,’ ಎಂದು ಪ್ರಸಾದ್ ಹೇಳಿದರು.

ಪುನೀತ್ ಇತ್ತೀಚಿಗೆ ತಮ್ಮೊಂದಿಗೆ ಮಾತಾಡಿದ ಸಂದರ್ಭವನ್ನು ಸಹ ನಾಗೇಂದ್ರ ಪ್ರಸಾದ್ ಜ್ಞಾಪಿಸಿಕೊಂಡರು. ಖ್ಯಾತ ನಟ-ನಿರ್ದೇಶಕ ಪ್ರಭುದೇವ ಅವರ ತಮ್ಮನ ಹೆಸರು ಸಹ ನಾಗೇಂದ್ರ ಪ್ರಸಾದ್ ಆಗಿದ್ದು ಅವರ ನಿರ್ದೇಶನ ಚಿತ್ರವೊಂದರಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವವರಿದ್ದರು. ಅದೊಂದು ದಿನ ಅಪ್ಪು ಆ ನಾಗೇಂದ್ರ ಪ್ರಸಾದ್ ಗೆ ಫೋನ್ ಮಾಡುವ ಬದಲು ಈ ನಾಗೇಂದ್ರ ಪ್ರಸಾದ್ ಗೆ ಫೋನ್ ಮಾಡಿ ಪಾತ್ರಕ್ಕೆ ಕಾಸ್ಟೂಮ್ಸ್ ಬಗ್ಗೆ ವಿಚಾರಿಸಿದರಂತೆ.

ಆಗ ಪ್ರಸಾದ ಅವರೇ ವಿಷಯವನ್ನು ಸ್ಪಷ್ಟಪಡಿಸಿ, ಅವರು ತಮಗೆ ಹಾಗೆ ಫೋನ್ ಮಾಡುವ ಸಂದರ್ಭವನ್ನು ಎದುರು ನೋಡುತ್ತಿರುವುದಾಗಿ ಹೇಳಿದಾಗ, ಅಪ್ಪು, ಖಂಡಿತ ಮಾಡೋಣ ಒಂದು ಒಳ್ಳೆ ಕತೆ ತೆಗೆದುಕೊಂಡು ಒಂದು ದಿನ ಮನೆಗೆ ಬನ್ನಿ ಅಂತ ಹೇಳಿದರಂತೆ.

ಆದರೆ ಆ ದಿನ ಬರಲೇ ಇಲ್ಲ ಎಂದು ನಾಗೇಂದ್ರ ಪ್ರಸಾದ ವಿಷಾದ ವ್ಯಕ್ತಪಡಿಸಿದರು. ಪುನೀತ್ ಅವರ ‘ದ್ವಿತ್ವ’ ಚಿತ್ರಕ್ಕೆ ಪ್ರಸಾದ್ ಅವರೇ ಹಾಡುಗಳನ್ನು ಬರೆಯಬೇಕಿತ್ತಂತೆ.

ಡಾ ರಾಜ್ ಅವರ ಜೊತೆ ಮಾತಿಗೆ ಕುಳಿತಾಗ ಅವರು ಅಪ್ಪು ಬಗ್ಗೆ ಜಾಸ್ತಿ ಮಾತಾಡುತ್ತಿರಲಿಲ್ಲವಂತೆ. ತಮ್ಮ ಸಿನಿಮಾದ ಅನುಭವಗಳನ್ನು ಅವರು ಮಾತಾಡುತ್ತಿದ್ದರು ಎಂದು ಪ್ರಸಾದ್ ಹೇಳಿದರು.

ಚಿತ್ರರಂಗ ಒಂದು ಮನೆಯಂತಾದರೆ, ಅಪ್ಪು ಅದರ ಬಾಗಿಲಾಗಿದ್ದರು, ಈಗ ಆ ಮನೆಯ ಬಾಗಿಲೇ ಇಲ್ಲದಂತಾಗಿದೆ ಅಂತ ಅವರು ಭಾವುಕರಾಗಿ ಹೇಳಿದರು.

ಇದನ್ನೂ ಓದಿ:   ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?