ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಗ್ರಾಮೀಣ ಭಾಗದ ಮಹಿಳೆಯರು ಸಣ್ಣ ಉಳಿತಾಯದ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗುತ್ತಿದೆ ಎಂಬುದಕ್ಕೆ ರಾಯಚೂರಿನ ಸಿಂಧನೂರಿನ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ್ದು, ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ರಾಯಚೂರು, ಜನವರಿ 3: ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ರಾಯಚೂರಿನಲ್ಲಿ ಗೃಹಿಣಿಯೊಬ್ಬರು ಫ್ರಿಡ್ಜ್ ಖರೀದಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ನಡುಲಮನಿ ಅವರು, ಸರ್ಕಾರದಿಂದ ಪ್ರತಿ ತಿಂಗಳು ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ. ಹನುಮಮ್ಮ ಅವರು ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಒಟ್ಟು 23 ಕಂತುಗಳ ಹಣವನ್ನು ಪಡೆದಿದ್ದು, ಆ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. ಈ ಮೂಲಕ ಒಟ್ಟು 17 ಸಾವಿರ ರೂಪಾಯಿ ವೆಚ್ಚದಲ್ಲಿ ಫ್ರಿಡ್ಜ್ ಖರೀದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದರಿಂದ ತಮ್ಮ ಕುಟುಂಬದ ದಿನನಿತ್ಯದ ಜೀವನ ಸುಲಭವಾಗಿದ್ದು, ಆಹಾರ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅನುಕೂಲವಾಗಿದೆ ಎಂದು ಹನುಮಮ್ಮ ತಿಳಿಸಿದ್ದಾರೆ.
ಫ್ರಿಡ್ಜ್ ಖರೀದಿಸಿದ ನಂತರ ಮಾತನಾಡಿದ ಹನುಮಮ್ಮ ನಡುಲಮನಿ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
