ರಾಯಚೂರು: 350 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕ!
ರಾಯಚೂರು ಜಿಲ್ಲೆಯ 50ಕ್ಕೂ ಹೆಚ್ಚು ಪ್ರೌಢಶಾಲೆಗಳು ಕಾಯಂ ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ. ಎಲೆಬಿಚ್ಚಾಲಿ ಗ್ರಾಮದ ಶಾಲೆಯಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣದ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಅತಿಥಿ ಶಿಕ್ಷಕರ ಮೇಲೆ ಅವಲಂಬನೆಯು ಮಕ್ಕಳ ಭವಿಷ್ಯವನ್ನು ಅತಂತ್ರಗೊಳಿಸಿದೆ.
ರಾಯಚೂರು, ಸೆಪ್ಟೆಂಬರ್ 8: ರಾಯಚೂರು ಜಿಲ್ಲೆಯ ಹಲವು ಶಾಲೆಗಳು ತೀವ್ರ ಶಿಕ್ಷಕರ ಕೊರತೆಯಿಂದ ಬಳಲುತ್ತಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 20ಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ಯಾವುದೇ ಕಾಯಂ ಶಿಕ್ಷಕರಿಲ್ಲ. ಅಲ್ಲದೆ, 50ಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ಕೇವಲ ಒಬ್ಬರೇ ಕಾಯಂ ಶಿಕ್ಷಕರಿದ್ದಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಸರ್ಕಾರಿ ಹೈಸ್ಕೂಲ್ ಇದಕ್ಕೆ ಉದಾಹರಣೆಯಾಗಿದೆ. ಇಲ್ಲಿ 8, 9 ಮತ್ತು 10ನೇ ತರಗತಿಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಇಡೀ ಶಾಲೆಗೆ ಒಬ್ಬರೇ ಕಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಶಿಕ್ಷಕರು ಅತಿಥಿ ಶಿಕ್ಷಕರಾಗಿದ್ದು, ಅವರಿಗೆ ಗುಣಮಟ್ಟದ ಬೋಧನೆ ನೀಡಲು ಒತ್ತಡವಿರುತ್ತದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಯಂ ಶಿಕ್ಷಕರಿಲ್ಲದೆ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು, ಅವರು ಕೂಲಿ ಕಾರ್ಮಿಕರಾಗಿ ಉಳಿಯಬೇಕಾಗಬಹುದು ಎಂಬ ಆತಂಕ ಪೋಷಕರಲ್ಲಿದೆ.
ವಿದ್ಯಾರ್ಥಿಗಳು ಸಹ ಕಾಯಂ ಶಿಕ್ಷಕರ ನೇಮಕಕ್ಕೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಸ್ತುತ ಒಬ್ಬರೇ ಇರುವ ಕಾಯಂ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡವಿದ್ದು, ಇದರಿಂದ ಬೋಧನೆಯ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ. ಶೀಘ್ರವೇ ಕಾಯಂ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ರಕ್ಷಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
