ತುಂಗಭದ್ರಾ ಜಲಾಶಯದಿಂದ ನೀರು ಹೊರಬಿಡುವ ಕಾರ್ಯ ಆರಂಭ, ಪ್ರವಾಹದ ಭೀತಿಯಲ್ಲಿ ಜನ

|

Updated on: Aug 13, 2024 | 11:32 AM

ಸುಮಾರು 60 ಟಿಎಂಸಿ ನೀರು ಜಲಾಶಯದಿಂದ ಹೊರಗೆ ಬಿಡುತ್ತಿರುವುದರಿಂದ ರೈತರಿಗೆ ದೊಡ್ಡ ಸಮಸ್ಯೆ ಎದುರಾಗಲಿದೆ. ಕೇವಲ ಒಂದು ಬೆಳೆಗೆ ಮಾತ್ರ ನೀರು ಸಿಗಲಿದೆಯಂತೆ. ಒಂದು ಬೆಳೆ, ಕೈಗಾರಿಕೆ ಮತ್ತು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಉಳಿಯಲಿದೆಯೆಂದು ವರದಿಗಾರ ಹೇಳುತ್ತಾರೆ. ಮಳೆ ಕಡಿಮೆಯಾಗಿರುವುದರಿಂದ ಜಲಾಶಯ ಪುನಃ ಭರ್ತಿಯಾಗುವುದು ಕಷ್ಟಸಾಧ್ಯ.

ಹೊಸಪೇಟೆ: ತುಂಗಭದ್ರಾ ನದಿಪಾತ್ರದ ಜನ ಮತ್ತು ಬೇಸಾಯಕ್ಕಾಗಿ ಟಿಬಿ ಡ್ಯಾಂ ನೀರನ್ನು ಅವಲಂಬಿಸಿರುವ ರೈತಾಪಿ ಸಮುದಾಯ ಸಂಕಷ್ಟಕ್ಕೀಡಾಗಿದ್ದಾರೆ ಅಂತ ಹೇಳಿದರೆ ಅದು ಅಂಡರ್ ಸ್ಟೇಟ್ಮೆಂಟ್ ಆಗುತ್ತದೆ. ಕಳೆದ ಶನಿವಾರ ತುಂಗಭದ್ರಾ ಜಲಾಶಯದ 19 ನೇ ಕ್ರೆಸ್ಟ್ ಗೇಟ್ ನ ಚೇನ್ ಲಿಂಕ್ ಮುರಿದು ಗೇಟ್ ನೀರಲ್ಲಿ ಕೊಚ್ಚಿಕೊಂಡು ಹೋಗಿರುವುದರಿಂದ ಆ ಗೇಟ್ ನಿಂದ ಒಂದೇ ಸಮನೆ ನೀರು ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಮುರಿದು ಹೋಗಿರುವ ಗೇಟನ್ನು ಮರುಜೋಡಣೆ ಮಾಡುವ ಅವಶ್ಯಕತೆ ಎದುರಾಗಿದೆ. ಆದರೆ ಅದನ್ನು ಮಾಡಬೇಕಾದರೆ ಜಲಾಶಯದಲ್ಲಿರುವ ಸುಮಾರು 60 ಟಿಎಂಸಿ ನೀರನ್ನು ನದಿಗಳಿಗೆ ಹರಿಬಿಡಬೇಕು. ನೀರನ್ನು ಹೊರಬಿಡುವ ಕೆಲಸ ಇಂದಿನಿಂದ ಆರಂಭಗೊಂಡಿದ್ದು ಬೆಳಗ್ಗೆ ಸುಮಾರು 1.14 ಲಕ್ಷ ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಕ್ಕೆ ಹರಿಸಲಾಗಿದೆ ಎಂದು ನಮ್ಮ ವಿಜಯನಗರ ವರದಿಗಾರ ಹೇಳುತ್ತಾರೆ. ಹಾಗಾಗಿ, ಕಂಪ್ಲಿ, ಹಂಪಿ ಮತ್ತು ಶಿರಗುಪ್ಪ ಮೊದಲಾದ ಊರುಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಅದಾಗಲೇ 103 ಟಿಎಂಸಿ ನೀರು ಸಂಗ್ರಹಗೊಂಡಿತ್ತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ

Follow us on