ಇಡಾ ಸುಂಟರಗಾಳಿಯಿಂದಾಗಿ ಜೆರ್ಸಿ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ 25 ಜನ ಬಲಿ, ಬೀದಿಗಳಲ್ಲಿ 8 ಅಡಿ ಎತ್ತರ ನೀರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2021 | 12:26 AM

ನ್ಯೂ ಜೆರ್ಸಿಯ ಮೇಯರ್ ಫಿಲ್ ಮರ್ಫಿ ಜನರಿಗೆ ಮನೆಬಿಟ್ಟು ಆಚೆ ಬಾರದಂತೆ ಎಚ್ಚರಿಸಿದ್ದಾರೆ. ಬಂದರೆ ನಿಸ್ಸಂದೇಹವಾಗಿ ಅಪಾಯಕ್ಕೆ ಆಹ್ವಾನವಿತ್ತಂತೆ.

ಅಮೆರಿಕದ ಪ್ರಮುಖ ನಗರಗಳಾಗಿರುವ ನ್ಯೂ ಯಾರ್ಕ್, ನ್ಯೂ ಜೆರ್ಸಿ ಸೇರಿದಂತೆ ಈಶಾನ್ಯ ಪ್ರಾಂತ್ಯಕ್ಕಿರುವ 4 ರಾಜ್ಯಗಳು ಇಡಾ ಚಂಡಮಾರುತದ ಹೊಡೆತಕ್ಕೆ ಸಿಕ್ಕು ಅಕ್ಷರಶಃ ಪರದಾಡುತ್ತಿವೆ. ಸುಂಟರಗಾಳಿ ಸೃಷ್ಟಿಸಿದ ಭಾರಿ ಮಳೆ ಈ ಭಾಗದ ಜನರನ್ನು ದಿಕ್ಕೆಡಿಸಿದೆ. ಮನೆ, ಅಪಾರ್ಟ್ಮೆಂಟ್ಗಳಲೆಲ್ಲ ನೀರು ತುಂಬಿದ್ದು ಜನ ಛಾವಣಿಗಳ ಮೇಲೆ ಆಶ್ರಯ ಪಡೆದಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಇಡಾದ ಪ್ರತಾಪಕ್ಕೆ ಈ ರಾಜ್ಯಗಳ 48 ಜನ ಸತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದಾದ ನಿರೀಕ್ಷೆಯಿದೆ.

ನೀವು ಇಲ್ಲಿ ನೋಡುತ್ತಿರುವ ವಿಡಿಯೋ ನ್ಯೂ ಜೆರ್ಸಿ ರಾಜ್ಯದ ಜೆರ್ಸಿ ನಗರದ್ದಾಗಿದೆ. ರಸ್ತೆಗಳು ಸಾಮಾನ್ಯ ಮಳೆಗಾಲದಲ್ಲಿ ದೊಡ್ಡ ಕಾಲುವೆಗಳ ಹಾಗೆ ಹರಿಯುವ ಬೆಂಗಳೂರಿನ ರಸ್ತೆಗಳ ಹಾಗೆ ಕಾಣುತ್ತಿವೆ. ಒಂದು ಜೋರು ಮಳೆ ಬಂದರೂ ನಮ್ಮ ಬೆಂಗಳೂರಿನ ರೋಡುಗಳು ಹೀಗೆ ಕಾಣುತ್ತವೆ. ಆದರೆ, ಜೆರ್ಸಿಯಲ್ಲಿ ಚಂಡಮಾರುತ ಸೃಷ್ಟಿಸಿರುವ ಮಳೆಯಾಗಿದೆ. ಸತತವಾಗಿ ಒಂದು ವಾರದಿಂದ ಇಲ್ಲಿ ಮಳೆಯಾಗುತ್ತಿದೆ. ನಗರದ ವಾಹನ ಸಂಚಾರ ಸಾಧ್ಯವೇ ಇಲ್ಲ, ನ್ಯೂ ಜೆರ್ಸಿಯ ಮೇಯರ್ ಫಿಲ್ ಮರ್ಫಿ ಜನರಿಗೆ ಮನೆಬಿಟ್ಟು ಆಚೆ ಬಾರದಂತೆ ಎಚ್ಚರಿಸಿದ್ದಾರೆ. ಬಂದರೆ ನಿಸ್ಸಂದೇಹವಾಗಿ ಅಪಾಯಕ್ಕೆ ಆಹ್ವಾನವಿತ್ತಂತೆ. ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ನೀರು ಬಹಳ ರಭಸದಿಂದ ಹರಿಯುತ್ತಿದೆ. ನ್ಯೂ ಜೆರ್ಸಿಯ ಹಾಗೆ ಪೆನ್ಸಿಲ್ವನಿಯಾ ಮತ್ತು ಕನೆಕ್ಟಿಕಟ್ ರಾಜ್ಯಗಳಲ್ಲಿನ ಪರಿಸ್ಥಿತಿ ಸಹ ಇದೇ ತೆರನಾಗಿದೆ

ಪ್ರವಾಹ ಸೃಷ್ಟಿಸಿರುವ ಅನಾಹುತ ಬಗ್ಗೆ ಟ್ವೀಟ್ ಮಾಡಿರುವ ಮರ್ಫಿ ಅವರು ರಾಜ್ಯದ 25 ಜನ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ 8 ಅಡಿಗಳಷ್ಟು ಎತ್ತರ ನೀರಿ ಕೊಚ್ಚಿ ಹೋಗುತ್ತಿದೆ ಎಂದು ಮೇಯರ್ ಮರ್ಫಿ ಹೇಳಿದ್ದಾರೆ.

ಇದನ್ನೂ ಓದಿ:   ನ್ಯೂ ಯಾರ್ಕ್ ಎದುರಿಸುತ್ತಿರುವ ಪ್ರವಾಹದಂಥ ಸ್ಥಿತಿಯಲ್ಲಿ ಆಸ್ಪತ್ರೆ ಹೊಕ್ಕ ನೀರು ಕೊವಿಡ್ ರೋಗಿಯನ್ನು ಬೆಡ್ ಸಮೇತ ಬೀದಿಗೆಳೆದಿದೆ!