ಮಗಳ ನೋವಿನ ಸಂಕಟದಲ್ಲಿದ್ದ ಅಧಿಕಾರಿಯಿಂದ ಲಂಚ: ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆಂದ ಪರಮೇಶ್ವರ್
ಬೆಂಗಳೂರಿನ ಲಂಚ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಗಳ ಸಾವಿನ ದುಃಖದಲ್ಲಿದ್ದ ತಂದೆಯಿಂದ ಲಂಚ ಪಡೆದ ಆರೋಪದಡಿ ಪಿಎಸ್‌ಐ ಮತ್ತು ಪಿಸಿ ಅಮಾನತುಗೊಳಿಸಲಾಗಿದೆ. ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರಿನಲ್ಲಿ ಭಾರತ್ ಪೆಟ್ರೋಲಿಯಂನ ನಿವೃತ್ತ ಸಿಎಫ್‌ಒ ಶಿವಕುಮಾರ್ ಅವರಿಂದ ಲಂಚ ಪಡೆದಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ‘ಟಿವಿ9’ ನಿರಂತರ ವರದಿಗಳ ಬೆನ್ನಲ್ಲೇ, ಮಗಳ ಸಾವಿನ ಸಂಕಟದಲ್ಲಿದ್ದ ಶಿವಕುಮಾರ್ ಅವರಿಂದ ಲಂಚ ಪಡೆದ ಆರೋಪದ ಮೇಲೆ ಒಬ್ಬ ಪಿಎಸ್‌ಐ ಮತ್ತು ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ (ಪಿಸಿ) ಅವರನ್ನು ಅಮಾನತುಗೊಳಿಸಲಾಗಿದೆ. ಹಣ ಪಡೆದಿರುವುದು ದೃಢಪಟ್ಟ ಕೂಡಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಇಲಾಖೆ ಅಥವಾ ಸರ್ಕಾರದ ಯಾವುದೇ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುವ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗುವುದಿಲ್ಲ ಎಂದು ಡಾ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಪೊಲೀಸರ ವಿರುದ್ಧ ಇಂತಹ ಯಾವುದೇ ಮಾಹಿತಿ ಬಂದರೂ, ಅದು 500 ರೂಪಾಯಿ ಆಗಿರಲಿ ಅಥವಾ 5000 ರೂಪಾಯಿ ಆಗಿರಲಿ ತಕ್ಷಣವೇ ಅಮಾನತು, ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು. ತನಿಖೆಯಲ್ಲಿ ಆರೋಪ ಸಾಬೀತಾದರೆ, ಅವರನ್ನು ಸೇವೆಯಿಂದ ವಜಾಗೊಳಿಸುವುದಾಗಿಯೂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿದ್ದಾರೆ ಹೆಣದ ಮೇಲೂ ಹಣ ಮಾಡೋ ಭ್ರಷ್ಟರು! ಗಣ್ಯರಿಗೇ ಹೀಗಾದರೆ ಸಾಮಾನ್ಯರ ಪಾಡೇನು?

