ಬಾಗಲಕೋಟೆ ಬಡ ವಿದ್ಯಾರ್ಥಿನಿಗೆ ಕ್ರಿಕೆಟರ್ ರಿಷಭ್ ಪಂತ್ ನೆರವಿನ ಹಸ್ತ

Updated By: Ganapathi Sharma

Updated on: Aug 06, 2025 | 12:35 PM

ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿ ಜ್ಯೋತಿ ಕಣಬೂರ್ ಅವರಿಗೆ ಬಿಸಿಎ ಕೋರ್ಸ್‌ಗೆ ಅಗತ್ಯವಿರುವ 40,000 ರೂಪಾಯಿಗಳನ್ನು ಕ್ರಿಕೆಟಿಗ ರಿಷಭ್ ಪಂತ್ ನೀಡಿ ನೆರವಾಗಿದ್ದಾರೆ. ಜ್ಯೋತಿಯ ಪೋಷಕರು ಬಡವರಾಗಿದ್ದು, ಕೋರ್ಸ್‌ಗೆ ಹಣ ಒದಗಿಸಲು ಕಷ್ಟಪಡುತ್ತಿದ್ದರು. ಈ ವಿಷಯ ತಿಳಿದು ಒಬ್ಬ ಸ್ಥಳೀಯ ಯುವಕ ಐಪಿಎಲ್ ನಲ್ಲಿ ಕೆಲಸ ಮಾಡುವ ತಮ್ಮ ಸ್ನೇಹಿತರ ಮೂಲಕ ರಿಷಭ್ ಪಂತ್ ಅವರನ್ನು ಸಂಪರ್ಕಿಸಿ ಸಹಾಯ ಪಡೆದಿದ್ದಾರೆ. ಜ್ಯೋತಿ ಮತ್ತು ಅವರ ಕುಟುಂಬ ರಿಷಭ್ ಪಂತ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

ಬಾಗಲಕೋಟೆ, ಆಗಸ್ಟ್​ 05: ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಕಾಲ್ಬೆರಳಿನ ಮೂಳೆ ಮುರಿತಕ್ಕೊಳಗಾಗಿದ್ದರೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದ ರಿಷಭ್ ಪಂತ್ ಈಗ ಮಾನವೀಯತೆ ಮೆರೆಯುವ ಮೂಲಕ ಮಾದರಿಯಾಗಿದ್ದಾರೆ. ಬಾಗಲಕೋಟೆಯ ಬಡ ವಿದ್ಯಾರ್ಥಿನಿ ಜ್ಯೋತಿ ಕಣಬೂರ್​​ಗೆ ಬಿಸಿಎ ಪದವಿ ಪ್ರವೇಶಕ್ಕೆ ಅವಶ್ಯವಿದ್ದ 40 ಸಾವಿರ ರೂಪಾಯಿ ಹಣ ನೀಡಿದ್ದಾರೆ.

ಜ್ಯೋತಿ ಕಣಬೂರ್​​ಗೆ ಉನ್ನತ ಶಿಕ್ಷಣದ ಹಂಬಲವಿತ್ತು. ಆದರೆ, ಬಡತನದಿಂದಾಗಿ ಆಕೆಯನ್ನು ಕಾಲೇಜಿಗೆ ಕಳುಹಿಸಲು ಆಕೆಯ ತಂದೆಗೆ ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಆ ಪ್ರತಿಭಾವಂತೆಯ ನೆರವಿಗೆ ನಿಂತವರು ಕ್ರಿಕೆಟಿಗ ರಿಷಬ್ ಪಂತ್.

ಕೂಲಿ ಹಣದಿಂದ ಪಿಯುಸಿ ಓದಿದ್ದ ಜ್ಯೋತಿ ಕಣಬೂರ್

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ತೀರ್ಥಯ್ಯ ಹಾಗೂ ರೂಪಾ ದಂಪತಿಗಳ ಮಗಳೇ ಜ್ಯೋತಿ ಕಣಬೂರ್. ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕ ಹೋಟೆಲ್ ಇರಿಸಿಕೊಂಡು ನಾಲ್ವರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಇವುಗಳ ಮಧ್ಯೆ ಜ್ಯೋತಿ ಸಹೋದರರು ಹೊಲದಲ್ಲಿ ಕೂಲಿ ಮಾಡುತ್ತಿದ್ದಾರೆ. ಹೀಗಿರುವಾಗ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 85 ಪ್ರತಿಶತ ಅಂಕ ಪಡೆದ ಜ್ಯೋತಿಗೆ ಮುಂದಿನ ವ್ಯಾಸಂಗಕ್ಕೆ ಹಣಕಾಸಿನ ತೊಂದರೆಯುಂಟಾಗಿತ್ತು. ಆಗ ಜ್ಯೋತಿಯ ಸಮಸ್ಯೆ ಕೇಳಿ ತಕ್ಷಣ ರಿಷಭ್ ಪಂತ್ ಆಕೆಯ ಮೊದಲ ವರ್ಷದ ಬಿಸಿಎ ತರಗತಿಗೆ ಅವಶ್ಯಕತೆ ಇರುವ 40 ಸಾವಿರ ರೂಪಾಯಿ ಹಣ ನೆರವು ನೀಡಿದ್ದಾರೆ.

ಜ್ಯೋತಿ ಕಣಬೂರ್ ಸಮಸ್ಯೆ ರಿಷಭ್ ಪಂತ್​ಗೆ ಗೊತ್ತಾಗಿದ್ಹೇಗೆ?

ಕಣಬೂರ್ ಕುಟುಂಬದ ಕೊನೆಯ ಕುಡಿಯಾಗಿರುವ ಜ್ಯೋತಿ ಹೊಲದಲ್ಲಿ ಕೆಲಸ ಮಾಡುತ್ತಲೇ ಬಂದ ಹಣದಿಂದ ಪಿಯುಸಿ ಶಿಕ್ಷಣ ಮುಗಿಸಿದ್ದಳು. ಬಳಿಕ ಜಮಖಂಡಿ ಬಿಎಲ್​ಡಿಇ ಕಾಲೇಜಿನಲ್ಲಿ ಬಿಸಿಎ ತರಗತಿಗೆ ಪ್ರವೇಶ ಪಡೆಯಲು ಮುಂದಾದಾಗ ಹಣಕಾಸಿನ ತೊಂದರೆಯುಂಟಾಗಿದೆ. ಆಗ ತಂದೆ ತೀರ್ಥಯ್ಯ ಗ್ರಾಮದ ಅನಿಲ್ ಹುಣಸಿಕಟ್ಟಿ ಅವರ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಇವರ ಗೋಳು ಕೇಳಿ ಅನಿಲ್ ಹುಣಸೀಕಟ್ಟಿ, ಬೆಂಗಳೂರು ಹಾಗೂ ಮುಂಬೈನಲ್ಲಿ ರಿಷಭ್ ಪಂತ್ ಅವರ ಡಿಜಿಟಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಸ್ನೇಹಿತ ಅಕ್ಷಯ್ ನಾಯಕ್ ಎಂಬುವರಿಗೆ ಮಾಹಿತಿ ನೀಡಿದ್ದಾರೆ. ಅಕ್ಷಯ್ ಕೂಡಲೇ ರಿಷಭ್​ ಪಂತ್​​​ಗೆ ವಿಷಯ ತಿಳಿಸಿದ್ದಾರೆ. ಪಂತ್ ಜುಲೈ 17 ರಂದು ನೇರವಾಗಿ ಕಾಲೇಜ್​ಗೆ ಆರ್​​ಟಿಜಿಎಸ್ ಮೂಲಕ 40 ಸಾವಿರ ರೂ. ಹಣ ಸಂದಾಯ ಮಾಡಿದ್ದಾರೆ.

ಬಿಎಲ್​​​ಡಿಇ ಸಂಸ್ಥೆಯಿಂದ ಅಭಿನಂದನೆ

ರಿಷಭ್ ಪಂತ್ ವಿದ್ಯಾರ್ಥಿನಿಗೆ ನೆರವು ನೀಡಿದ ವಿಚಾರವಾಗಿ ಬಿಎಲ್​​​ಡಿಇ ಸಂಸ್ಥೆಯಿಂದ ಅಭಿನಂದನಾ ಪತ್ರವನ್ನು ಕಳುಹಿಸಿಕೊಡಲಾಗಿದೆ. ರಿಷಭ್ ಪಂತ್ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಿನಲ್ಲಿ, ಕ್ರಿಕೆಟ್ ಕ್ಷೇತ್ರದಲ್ಲಿ ತಾವಾಯ್ತು ತಮ್ಮ ಸಾಧನೆ ಆಯ್ತು ಎಂದು ಬೀಗುತ್ತಿರುವ ಕ್ರಿಕೆಟಿಗರ ಮಧ್ಯೆ ರಿಷಭ್ ಪಂತ್ ಬಡ ವಿದ್ಯಾರ್ಥಿನಿಗೆ ಹಣಕಾಸಿನ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 05, 2025 07:32 PM