ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದಾಳೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ

|

Updated on: Jun 27, 2024 | 12:01 PM

ನೇತ್ರಾವತಿಯ ನದಿ ನೀರು ಹರಿದು ಮುಂದೆ ಅರಬ್ಬೀ ಸಮುದ್ರ ಸೇರುತ್ತದೆ. ನೀರಿನ ಹರಿವು ಪ್ರಮಾಣ ಜೋರಾಗಿರುವುದರಿಂದ ಸಮುದ್ರವೂ ಪ್ರಕ್ಷುಬ್ದಗೊಂಡಿದೆಯೆಂದು ವರದಿಗಾರ ಹೇಳುತ್ತಾರೆ. ಕುಮಾರಧಾರ ನದಿ ಸಹ ಉಕ್ಕಿ ಹರಿಯುತ್ತಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತ ಜನರು ಸ್ನಾನಕ್ಕೆಂದು ನದಿಗಿಳಿಯಬಾರದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಂಗಳೂರು: ಈಗಾಗಲೇ ವರದಿಯಾಗಿರುವಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಎರಡು ದಿನಗಳಿಂದ ಜೋರು ಮಳೆಯಾಗುತ್ತಿದೆ. ಮಂಗಳೂರು ನಗರದ ಹತ್ತಿರದಿಂದ ಹರಿದು ಅರಬ್ಬ ಸುಮುದ್ರ ಕಡೆ ಸಾಗುವ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ ಎಂದು ನಮ್ಮ ಮಂಗಳೂರು ವರದಿಗಾರ ಹೇಳುತ್ತಾರೆ. ಕೇವಲ ನೇತ್ರಾವತಿ ನದಿ ಮಾತ್ರವಲ್ಲ, ಕರಾವಳಿ ಪ್ರದೇಶದಲ್ಲಿ ಹರಿಯುವ ಕುಮಾರಧಾರ, ನಂದಿನಿ ಮತ್ತು ಪಡುಕೋಣೆ ನದಿಗಳು ಸಹ ತುಂಬಿ ಹರಿಯುತ್ತಿವೆ. ನೇತ್ರಾವತಿ ನದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎಂದು ಕರೆಯಲಾಗುತ್ತದೆ ಮತ್ತು ನದಿಪಾತ್ರ ಜನ ಎಚ್ಚರಿಕೆಯಿಂದಿರಬೇಕು ಅಂತ ಜಿಲ್ಲಾಡಳಿತ ಸೂಚನೆಯನ್ನು ಜಾರಿ ಮಾಡಿದೆ. ಇವತ್ತು ಮಳೆಯ ಪ್ರತಾಪ ಕಡಿಮೆಯಾಗಿದೆಯಾದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ವಾರ ಘಟ್ಟಪ್ರದೇಶದಲ್ಲಿ ಪುನಃ ಮಳೆಯಾಗಲಿದೆ ಎಂದು ಸೂಚನೆ ನೀಡಿರುವ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ಸ್ನಾನಘಟ್ಟ ಮತ್ತು ಆಣೆಕಟ್ಟು ಮುಳುಗಡೆ, ನದಿಗಿಳಿಯದಂತೆ ಭಕ್ತಾದಿಗಳಿಗೆ ಎಚ್ಚರಿಕೆ     

Follow us on