ವಿಧಾನ ಸೌಧದ ಎದುರೇ ದರೋಡೆ, ಹೊಡೆದಾಟ: ಕೇಸ್ ದಾಖಲು
ಬೆಂಗಳೂರಿನ ಹೈಸೆಕ್ಯೂರಿಟಿ ಪ್ರದೇಶವಾದ ವಿಧಾನಸೌಧದ ಮುಂಭಾಗವೇ ದರೋಡೆ ಮತ್ತು ಹಲ್ಲೆ ಪ್ರಕರಣಗಳು ನಡೆದಿವೆ. ಮೆಟ್ರೋ ನಿಲ್ದಾಣದ ಬಳಿ ವಿದ್ಯಾರ್ಥಿಯೊಬ್ಬರ ಹಣ ಮತ್ತು ಮೊಬೈಲ್ ಕಳುವಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ 40-50 ನೇಪಾಳಿ ಯುವಕರ ಗುಂಪು ಹೊಡೆದಾಡಿಕೊಂಡಿದೆ. ಎರಡೂ ಘಟನೆಗಳ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ನವೆಂಬರ್ 19: ಅತಿ ಹೆಚ್ಚು ಭದ್ರತೆ ಇರುವ ವಿಧಾನಸೌಧ, ಹೈಕೋರ್ಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದರೋಡೆ ಮತ್ತು ಹಲ್ಲೆ ಪ್ರಕರಣಗಳು ನಡೆದಿವೆ. ವಿಧಾನಸೌಧದ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಯುವಕರ ಗುಂಪೊಂದು ಒಬ್ಬ ವಿದ್ಯಾರ್ಥಿ ಮತ್ತು ಅವರ ಸಹೋದರನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದೆ. ಆರೋಪಿಗಳು ವಿದ್ಯಾರ್ಥಿಯಿಂದ ಸುಮಾರು 9,182 ನಗದು ಹಣ ಮತ್ತು ಮೊಬೈಲ್ ಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ. ಇದೇ ಸ್ಥಳದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ನೇಪಾಳ ಮೂಲದ ಸುಮಾರು 40 ರಿಂದ 50 ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
