AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಿಧಾನಸೌಧ ಬೆನ್ನಲ್ಲೇ ರಾಜಭವನ ವೀಕ್ಷಣೆಗೂ ಸಾರ್ವಜನಿಕರಿಗೆ ಅವಕಾಶ!

ಜೂನ್‌ನಲ್ಲಿ ಸಾರ್ವಜನಿಕರಿಗೆ ವಿಧಾನಸೌಧ ಪ್ರವಾಸದ ಅದ್ಭುತ ಯಶಸ್ಸಿನ ನಂತರ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದೀಗ ಜನಸಾಮಾನ್ಯರಿಗೆ ರಾಜಭವನ ವೀಕ್ಷಣೆಗೆ ಮುಂದಾಗಿದೆ. ಆ ಮೂಲಕ 19ನೇ ಶತಮಾನದ ಐತಿಹಾಸಿಕ ಕಟ್ಟಡವನ್ನು ಒಳಗಿನಿಂದ ಕಣ್ತುಂಬಿಕೊಳ್ಳುವ ಭಾಗ್ಯ ಸಿಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ವಿಧಾನಸೌಧ ಬೆನ್ನಲ್ಲೇ ರಾಜಭವನ ವೀಕ್ಷಣೆಗೂ ಸಾರ್ವಜನಿಕರಿಗೆ ಅವಕಾಶ!
Raj Bhavan
ಗಂಗಾಧರ​ ಬ. ಸಾಬೋಜಿ
|

Updated on:Sep 01, 2025 | 11:59 AM

Share

ಬೆಂಗಳೂರು, ಸೆಪ್ಟೆಂಬರ್​ 01: ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದಲೇ ತುಂಬಿರುತ್ತಿದ್ದ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ (Vidhan Soudha) ಒಳಗೆ ಜನಸಾಮಾನ್ಯರಿಗೂ ಇತ್ತೀಚೆಗೆ ಅವಕಾಶ  ನೀಡಲಾಗಿತ್ತು. ಇದೀಗ ಅದೇ ರೀತಿಯಾಗಿ 19ನೇ ಶತಮಾನದ ಐತಿಹಾಸಿಕ ಕಟ್ಟಡ ರಾಜಭವನ (Raj Bhavan) ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳುತ್ತಿರುವುದಾಗಿ ವರದಿ ಆಗಿದೆ. ಆ ಮೂಲಕ ಜನರು ರಾಜಭವನವನ್ನು ಒಳಗಿನಿಂದ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಿಸಲಾಗಿರುವ ರಾಜಭವನವು ತನ್ನ ಅಪೂರ್ವ ವಾಸ್ತುಶಿಲ್ಪ, ಶ್ವೇತ ವರ್ಣದಿಂದ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯಪಾಲರು ನಿವಾಸಿಸುವ ರಾಜಭವನವನ್ನು ನೋಡಬೇಕು ಎನ್ನುವುದು ಸಾಕಷ್ಟು ಜನರ ಆಸೆ. ಸದ್ಯ ಜನರ ಆ ಆಸೆ ನೆರವೇರುವ ಕಾಲ ಸನ್ನಿಹಿತವಾಗಿದೆ. ಮೊಟ್ಟಮೊದಲ ಬಾರಿಗೆ ಗೈಡ್ ಟೂರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಇದನ್ನೂ ಓದಿ: ಸಾರ್ವಜನಿಕರಿಗೂ ಇನ್ಮುಂದೆ ವಿಧಾನಸೌಧ ವೀಕ್ಷಣೆಗೆ ಅವಕಾಶ: ರಾಜ್ಯ ಸರ್ಕಾರದ ವಿನೂತನ ಪ್ರಯತ್ನ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಐತಿಹಾಸಿಕ ರಾಜಭವನದೊಳಗೆ ವಾಕಿಂಗ್ ಟೂರ್​ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಈಗಾಗಲೇ ಅಧಿಕೃತ ಅನುಮೋದನೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಮತ್ತು ಹಿಂದೂಸ್ತಾನ ಟೈಮ್ಸ್​ ವರದಿ ಮಾಡಿವೆ.

ಸಂದರ್ಶಕ ಸ್ನೇಹಿ ಪ್ರದೇಶಗಳನ್ನು ಗುರುತಿಸಲು, ಪ್ರವಾಸ ಮಾರ್ಗ ಮತ್ತು ವೀಕ್ಷಣಾ ಸಮಯವನ್ನು ನಿಗದಿ ಪಡಿಸಲಾಗುತ್ತಿದ್ದು, ಪ್ರಸ್ತುತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿರುವುದಾಗಿ ಈ ಯೋಜನೆಯ ಮೇಲ್ವಿಚಾರಕರಾದ ಕೆಎಸ್‌ಟಿಡಿಸಿಯ ಜನರಲ್ ಮ್ಯಾನೇಜರ್ ಶ್ರೀನಾಥ್ ಕೆ ಎಸ್ ಹೇಳಿರುವುದಾಗಿ ವರದಿ ಆಗಿದೆ.

ರಾಜಭವನವು ಐತಿಹಾಸಿಕ ಮಹತ್ವವನ್ನು ಹೊಂದಿದೆ. 1840 ಮತ್ತು 1842 ರ ನಡುವೆ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ್ದ ಈ ನಿವಾಸವನ್ನು ಮೂಲತಃ ಬ್ರಿಟಿಷ್ ಆಯುಕ್ತರಿಗಾಗಿ ನಿರ್ಮಿಸಲಾಗಿತ್ತು. ಆಗ ರೆಸಿಡೆನ್ಸಿ ಎಂದು ಕರೆಯಲ್ಪಡುತ್ತಿದ್ದ ಇದು ನಂತರ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಎಲೀನರ್ ರೂಸ್ವೆಲ್ಟ್ ಅವರಂತಹ ಗಣ್ಯರಿಗೆ ಆತಿಥ್ಯ ವಹಿಸುವ ಉನ್ನತ ಮಟ್ಟದ ಅತಿಥಿ ಗೃಹವಾಗಿ ಪರಿವರ್ತನೆಗೊಂಡಿತ್ತು.

ಇದನ್ನೂ ಓದಿ: ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್​ ಬುಕ್ಕಿಂಗ್​ ಎಲ್ಲಿ ಮಾಡಬೇಕು, ದರ ಎಷ್ಟು? ಇಲ್ಲಿದೆ ವಿವರ

ಸ್ವಾತಂತ್ರ್ಯಾನಂತರ ಇದನ್ನು ರಾಜಭವನವಾಗಿ ರೂಪಾಂತರಿಸಲಾಯಿತು. ಅಂತಿಮವಾಗಿ ಕರ್ನಾಟಕದ ರಾಜ್ಯಪಾಲರ ಅಧಿಕೃತ ನಿವಾಸವಾಯಿತು. ಜೂನ್‌ನಲ್ಲಿ ನಡೆದ ವಿಧಾನಸೌಧ ಪ್ರವಾಸದ ಅದ್ಭುತ ಯಶಸ್ಸಿನ ನಂತರ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:55 am, Mon, 1 September 25