ಚಿಕ್ಕಜಾಲದಲ್ಲಿ ಮೆಟ್ರೋ ಸ್ಟೇಷನ್ ಬಯಸಿದವರಿಗೆ ಶಾಕ್ ಕೊಟ್ಟ ಹೈಕೋರ್ಟ್, ಸ್ಥಳೀಯರ ಆಸೆ ನಿರಾಸೆ
Namma Metro Blue Line: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾದು ಹೋಗುವ ನಮ್ಮ ಮಟ್ರೋ ನೀಲಿ ಮಾರ್ಗದಲ್ಲಿ ಚಿಕ್ಕಜಾಲದಲ್ಲಿ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಬೇಡಿಕೆಯಾಗಿದೆ. ಈ ಬೇಡಿಕೆಗೆ ಬಿಎಂಆರ್ ಸಿಎಲ್ ಕ್ಯಾರೇ ಎನ್ನದ ಕಾರಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ, ಹೈಕೋರ್ಟ್ ನಲ್ಲೂ ಸಹ ನಿರಾಸೆಯಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 01): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport)ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ (Namma Metro)ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಆದರೆ, ಬಾಗಲೂರು ಕ್ರಾಸ್ ನಿಂದ ಸಾದಹಳ್ಳಿ ನಡುವೆ ಯಾವುದೇ ನಿಲ್ದಾಣ ನಿರ್ಮಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಚಿಕ್ಕಜಾಲದಲ್ಲಿ ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಆಗ್ರಹಗಳು ವ್ಯಕ್ತವಾಗಿವೆ. ಡಿಪಿಆರ್ ನಲ್ಲಿ ನಿಲ್ದಾಣಗಳನ್ನು ಅನುಮೋದಿಸಿದ್ದರೂ, ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಸಹ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಸ್ಟೇಷನ್ ನಿರ್ಮಾಣ ನ್ಯಾಯಾಂಗದ ಪರಿವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಸ್ಟೇಷನ್ ನಿರ್ಮಿಸುವಂತೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಚಿಕ್ಕಜಾಲದಲ್ಲಿ ಮೆಟ್ರೋ ಸ್ಟೇಷನ್ ನಿರ್ಮಾಣಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದು ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಎಂಆರ್ ಸಿಎಲ್ ಗೆ ಸ್ಥಳೀಯ ನಿವಾಸಿಗಳು ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ನಿವಾಸಿಗಳಿಗೆ ಪ್ರತಿಕ್ರಿಯಿಸಲು BMRCLಗೆ ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಕಾಮಗಾರಿ ವಿರುದ್ಧ ಆಕ್ರೋಶ: 8.5 ಕಿಮೀ ನೋ ಸ್ಟಾಪ್
ನಾಗವಾರದಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದ ರೈಲು ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೆ ಕಂಬಗಳನ್ನು ನಿರ್ಮಿಸಲಾಗಿದ್ದು, ಟ್ಯ್ರಾಕ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. 2026 ರಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಓಡಿಸುವ ಗುರಿಯನ್ನು ಸರ್ಕಾರ ಮತ್ತು ಬಿಎಂಆರ್ಸಿಎಲ್ ಹೊಂದಿದೆ. ಆದರೆ, ಈ ನಡುವೆ ಬಾಗಲೂರು ಕ್ರಾಸ್ನಿಂದ ಸಾದಹಳ್ಳಿ (8.5 ಕಿ.ಮೀ) ಮಧ್ಯೆ ಒಂದೇ ಒಂದು ಮೆಟ್ರೋ ನಿಲ್ದಾಣ ನಿರ್ಮಾಣ ಮಾಡದಿರುವುದು ಸ್ಥಳಿಯರನ್ನು ಕೆರಳಿಸಿದೆ.
ಡಿಪಿಆರ್ನಲ್ಲಿ (ನಕ್ಷೆ) ಬೆಟ್ಟಹಲಸೂರು ಮತ್ತು ಹುಣಸಮಾರನಹಳ್ಳಿ ಬಳಿ ಮೆಟ್ರೋ ನಿಲ್ದಾಣಕ್ಕೆ ಅನುಮೋದನೆ ನೀಡಲಾಗಿದೆ. ಆದರೂ ಕೂಡ ಅಧಿಕಾರಿಗಳು ಮಾತ್ರ ಚಿಕ್ಕಜಾಲ, ಹುಣಸಮಾರನಹಳ್ಳಿ ವಿದ್ಯಾನಗರ ಕ್ರಾಸ್ ಭಾಗದಲ್ಲಿ ಒಂದೇ ಒಂದು ನಿಲ್ದಾಣ ನಿರ್ಮಾಣ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಿಕ್ಕಜಾಲ ಮತ್ತು ಹುಣಸಮಾರನಹಳ್ಳಿ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವಂತೆ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ಸ್ಥಳೀಯರು ಮುಖ್ಯಮಂತ್ರಿ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಬಿಎಂಆರ್ ಸಿಎಲ್ ಯಾವುದೇ ಪ್ರತಿಕ್ರಿಯಿಸಿಲ್ಲ.
ಕೊನೆಗೆ ಸ್ಥಳೀಯರು ಚಿಕ್ಕಜಾಲದಲ್ಲಿ ಮೆಟ್ರೋ ಸ್ಟೇಷನ್ ನಿರ್ಮಾಣಕ್ಕೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಸಹ ಇದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪಿಐಎಲ್ ಅರ್ಜಿಯನ್ನು ವಜಾಗೊಳಿಸಿದೆ. ಆದ್ರೆ, ಸ್ಥಳೀಯರ ಮನವಿಗೆ ಪ್ರತಿಕ್ರಿಯಿಸುವಂತೆ ಕೋರ್ಟ್, ಬಿಎಂಆರ್ ಸಿಎಲ್ ಗೆ ಸೂಚನೆ ನೀಡಿದೆ.



