ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಕಾಮಗಾರಿ ವಿರುದ್ಧ ಆಕ್ರೋಶ: 8.5 ಕಿಮೀ ನೋ ಸ್ಟಾಪ್
ನಾಗವಾರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಆದರೆ, ಬಾಗಲೂರು ಕ್ರಾಸ್ ನಿಂದ ಸಾದಹಳ್ಳಿ ನಡುವೆ ಯಾವುದೇ ನಿಲ್ದಾಣ ನಿರ್ಮಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಡಿಪಿಆರ್ ನಲ್ಲಿ ನಿಲ್ದಾಣಗಳನ್ನು ಅನುಮೋದಿಸಿದ್ದರೂ, ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಸ್ಥಳೀಯರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ದೇವನಹಳ್ಳಿ, ಜುಲೈ 18: ನಾಗವಾರದಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ (Namma Metro) ನೀಲಿ ಮಾರ್ಗದ ರೈಲು ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೆ ಕಂಬಗಳನ್ನು ನಿರ್ಮಿಸಲಾಗಿದ್ದು, ಟ್ಯ್ರಾಕ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. 2026 ರಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಓಡಿಸುವ ಗುರಿಯನ್ನು ಸರ್ಕಾರ ಮತ್ತು ಬಿಎಂಆರ್ಸಿಎಲ್ ಹೊಂದಿದೆ. ಆದರೆ, ಈ ನಡುವೆ ಬಾಗಲೂರು ಕ್ರಾಸ್ನಿಂದ ಸಾದಹಳ್ಳಿ (8.5 ಕಿ.ಮೀ) ಮಧ್ಯೆ ಒಂದೇ ಒಂದು ಮೆಟ್ರೋ ನಿಲ್ದಾಣ ನಿರ್ಮಾಣ ಮಾಡದಿರುವುದು ಸ್ಥಳಿಯರನ್ನು ಕೆರಳಿಸಿದೆ.
ಡಿಪಿಆರ್ನಲ್ಲಿ (ನಕ್ಷೆ) ಬೆಟ್ಟಹಲಸೂರು ಮತ್ತು ಹುಣಸಮಾರನಹಳ್ಳಿ ಬಳಿ ಮೆಟ್ರೋ ನಿಲ್ದಾಣಕ್ಕೆ ಅನುಮೋದನೆ ನೀಡಲಾಗಿದೆ. ಆದರೂ ಕೂಡ ಅಧಿಕಾರಿಗಳು ಮಾತ್ರ ಚಿಕ್ಕಜಾಲ, ಹುಣಸಮಾರನಹಳ್ಳಿ ವಿದ್ಯಾನಗರ ಕ್ರಾಸ್ ಭಾಗದಲ್ಲಿ ಒಂದೇ ಒಂದು ನಿಲ್ದಾಣ ನಿರ್ಮಾಣ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಿಕ್ಕಜಾಲ ಮತ್ತು ಹುಣಸಮಾರನಹಳ್ಳಿ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವಂತೆ ಸ್ಥಳಿಯರು ಪ್ರತಿಭಟನೆ ನಡೆಸಿದರು.
ಮೆಟ್ರೋ ನಿಲ್ದಾಣಕ್ಕೆ ಡಿಪಿಆರ್ ಆಗಿ ಭೂ ಸ್ವಾಧೀನಕ್ಕೆ ಹಣ ಸಹ ಬಿಡುಗಡೆಯಾಗಿದೆಯಂತೆ. ಆದರೆ, ಕೊನೆ ಕ್ಷಣದಲ್ಲಿ ಹುಣಸಮಾರನಹಳ್ಳಿಯ ವಿಐಟಿ ಕ್ರಾಸ್ ಮತ್ತು ಚಿಕ್ಕಜಾಲ ಬಳಿ ಮೆಟ್ರೋ ನಿಲ್ದಾಣ ಮಾಡದೆ ನಿರ್ಲಕ್ಷ್ಯ ವಹಿಸಿದ್ದು ಚಿಕ್ಕಜಾಲ, ಹುಣಸಮಾರನಹಳ್ಳಿ, ಬೆಟ್ಟಹಲಸೂರು, ವಿಐಟಿ ಕ್ರಾಸ್ ಸೇರಿದಂತೆ ಸುತ್ತಾಮುತ್ತಲಿನ ಹತ್ತಾರು ಗ್ರಾಮಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜೊತೆಗೆ ಚಿಕ್ಕಜಾಲ ಮತ್ತು ಹುಣಸಮಾರನಹಳ್ಳಿ ನಡುವೆ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಪತ್ರ ಚಳುವಳಿ ಮೂಲಕ ಒತ್ತಾಯ ಮಾಡಿದ್ದು, ಮೆಟ್ರೋ ನಿಲ್ದಾಣ ಮಾಡದಿದ್ದರೇ ರೈಲು ಸಂಚಾರಕ್ಕೆ ಅವಕಾಶ ನೀಡದೆ, ಉಗ್ರ ಹೋರಾಟ ಮಾಡುತ್ತೇವೆ ಅಂತ ಜನರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದ ನಮ್ಮ ಮೆಟ್ರೋ!
ಒಟ್ಟಾರೆಯಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ ಕಾಮಗಾರಿ ಆರಂಭವಾದಾಗ ನಮ್ಮ ಗ್ರಾಮಗಳಿಗೆ ಅನುಕೂಲವಾಗುತ್ತೆ ಅಂತ ಖುಷಿಯಾಗಿದ್ದ ಜನರು ಇದೀಗ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡದಿರುವುದು ಕಂಡು ಹೋರಾಟದ ಹಾದಿ ಹಿಡಿದಿದ್ದಾರೆ. ಡಿಪಿಆರ್ನಲ್ಲಿ ಮೆಟ್ರೋ ನಿಲ್ದಾಣದ ಇದ್ದರೂ, ನಿರ್ಮಾಣ ಮಾಡಿಲ್ಲ ಅಂತ ಸ್ಥಳಿಯರು ಆರೋಪಿಸಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ಬಿಎಂಆರ್ಸಿಎಲ್ ಅಧಿಕಾರಿಗಳು ಎಚ್ಚೆತ್ತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Fri, 18 July 25







