Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ಯಾಕೆ? ನಿಜವಾದ ಕಾರಣ ಇಲ್ಲಿದೆ

Namma Metro Fare Hike: ಒಂದೆಡೆ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಕರ್ನಾಟಕ ಸರ್ಕಾರವು ಇದರಲ್ಲಿ ನಮ್ಮ ಕೈವಾಡವಿಲ್ಲ ಕೇಂದ್ರ ಸರ್ಕಾರ ಮಾಡಿದ್ದು ಎಂದು ಹೇಳಿ ಪ್ರತಿಭಟನೆಗೆ ಟೊಂಕಕಟ್ಟಿ ನಿಂತಿದೆ. ಮತ್ತೊಂದೆಡೆ ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ದೂಷಿಸುತ್ತಾ ವಿರೋಧಿಸುತ್ತಿದ್ದಾರೆ. ಇವರಿಬ್ಬರೂ ಮೆಟ್ರೋ ದರ ನಿಗದಿ ಮಾಡಿಲ್ಲವೆಂದರೆ ಮತ್ತೆ ಮಾಡಿದ್ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಒಟ್ಟಿನಲ್ಲಿ ನಮ್ಮ ಮೆಟ್ರೋ ದರವು ರಾಜಕೀಯ ವಲಯದಲ್ಲಿ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಹಾಗಾದರೆ ಬಿಎಂಆರ್​ಸಿಎಲ್ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ನಿಜವಾದ ಕಾರಣ ಏನಿರಬಹುದು ಈ ಕುರಿತು ಮಾಹಿತಿ ಇಲ್ಲಿದೆ.

ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ಯಾಕೆ? ನಿಜವಾದ ಕಾರಣ ಇಲ್ಲಿದೆ
ನಮ್ಮ ಮೆಟ್ರೋ Image Credit source: The Better India
Follow us
ನಯನಾ ರಾಜೀವ್
| Updated By: ಡಾ. ಭಾಸ್ಕರ ಹೆಗಡೆ

Updated on:Feb 12, 2025 | 3:58 PM

ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ತೀವ್ರ ಚರ್ಚೆಯ ಜತೆ ವಿರೋಧವನ್ನೂ ಹುಟ್ಟುಹಾಕಿದೆ. ಕರ್ನಾಟಕ ಸರ್ಕಾರವು ಕೇಂದ್ರದ ಬಿಜೆಪಿ ಸರ್ಕಾರವನ್ನು ದೂರಿದರೆ ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ದೂರುತ್ತಿದ್ದಾರೆ. ಹಾಗಾದರೆ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ಯಾರು ಮತ್ತು ಏಕೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡುತ್ತದೆ.

ಕೇಂದ್ರ ಬಿಜೆಪಿ ಸರ್ಕಾರ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಆರ್ ಥರಾನಿ ಅವರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಿತ್ತು, ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿನಿಧಿಗಳು ಸದಸ್ಯರಾಗಿದ್ದರು. 2024ರ ಸೆಪ್ಟೆಂಬರ್ 16ರಂದು ಅಧಿಕಾರ ಸ್ವೀಕರಿಸಿದ ಈ ಸಮಿತಿಗೆ ಮೂರು ತಿಂಗಳೊಳಗೆ ತನ್ನ ಶಿಫಾರಸನ್ನು ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಪತ್ರದಲ್ಲಿ ತಿಳಿಸಿತ್ತು.

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ತೀವ್ರ ವಿವಾದ ಉಂಟಾಗಿದೆ. ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸಿನಂತೆ ದರ ಏರಿಕೆಯಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ ಮತ್ತು ಸಾಲ ಪಾವತಿಯಿಂದಾಗಿ ಈ ನಿರ್ಧಾರ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಆದರೆ, ಈ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಮತ್ತು ವಿರೋಧ ವ್ಯಕ್ತವಾಗಿದೆ.

ಮೂರು ತಿಂಗಳ ಅವಧಿಯಲ್ಲಿ ದರ ಪರಿಷ್ಕರಣ ಸಮಿತಿ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆ ಮಾತ್ರವಲ್ಲ ದೆಹಲಿ ಮತ್ತು ಚನ್ನೈಗಳಿಗೆ ತೆರಳಿ ಅಲ್ಲಿನ ಮೆಟ್ರೋ ಸಂಸ್ಥೆಗಳ ಅಧಿಕಾರಿಗಳ ಜೊತೆಯಲ್ಲಿ ಕೂಡಾ ಕಾರ್ಯಾಚರಣೆ ಮತ್ತು ಪ್ರಯಾಣ ದರದ ಬಗ್ಗೆ ಸಮಾಲೋಚನೆ ನಡೆಸಿತ್ತು.

ಈ ಕುರಿತು ಡೆಕ್ಕನ್ ಹೆರಾಲ್ಡ್​ ವರದಿ ಮಾಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೊದಲು ಮೆಟ್ರೋ ದರ ಶೇ.105.15ರಷ್ಟು ಅಥವಾ ವರ್ಷದಿಂದ ವರ್ಷಕ್ಕೆ ಶೇ.14.02ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿತ್ತು. ಆದಾಗ್ಯೂ ದರ ನಿಗದಿ ಸಮಿತಿಯು ಶೇ.51.5 ರಷ್ಟು ಅಥವಾ ವರ್ಷದಿಂದ ವರ್ಷಕ್ಕೆ ಶೇ. 6.87ರಷ್ಟು ಕಡಿಮೆ ಹೆಚ್ಚಳವನ್ನು ಶಿಫಾರಸು ಮಾಡಿದೆ.

ಸಾಲ ಪಾವತಿ ಬಾಧ್ಯತೆಗಳನ್ನು ಪೂರೈಸಲು, ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚವನ್ನು ನಿರ್ವಹಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಬಿಎಂಆರ್‌ಸಿಎಲ್ ಒತ್ತಿ ಹೇಳಿದೆ. ನಮ್ಮ ಮೆಟ್ರೋ ಕೊನೆಯ ಬಾರಿಗೆ ಜೂನ್ 2017 ರಲ್ಲಿ ತನ್ನ ಪ್ರಯಾಣ ದರವನ್ನು ಹೆಚ್ಚಿಸಿತ್ತು.

ಮಾರ್ಚ್ 2017 ಮತ್ತು ಮಾರ್ಚ್ 2024 ರ ನಡುವೆ, ಬಿಎಂಆರ್​ಸಿಎಲ್​ ನ ಸಿಬ್ಬಂದಿ ವೆಚ್ಚ ಗಮನಾರ್ಹವಾಗಿ ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚವು ಶೇ. 42 ರಷ್ಟು ಹೆಚ್ಚಾಗಿದೆ, ಇಂಧನ ವೆಚ್ಚವು ಶೇ. 34 ರಷ್ಟು ಹೆಚ್ಚಾಗಿದೆ. ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು 366% ರಷ್ಟು ದುಬಾರಿಯಾಗಿದೆ.

2024-25 ರಿಂದ 2029-30 ರ ನಡುವೆ, BMRCL 10,422.2 ಕೋಟಿ ರೂ. ಸಾಲವನ್ನು ಹಿಂದಿರುಗಿಸಬೇಕಾಗುತ್ತದೆ. ಬೆಂಗಳೂರು ಮತ್ತು ದೆಹಲಿ ಮಹಾನಗರಗಳ ನಡುವಿನ ಹೋಲಿಕೆಗಳು ಸೂಕ್ತವಲ್ಲ ಎಂದು ಬಿಎಂಆರ್‌ಸಿಎಲ್ ಪ್ರತಿಪಾದಿಸಿದೆ ಏಕೆಂದರೆ ರಾಜಧಾನಿಯಲ್ಲಿ ಎಂಟು ವರ್ಷಗಳ ಹಿಂದೆ ದರಗಳನ್ನು ಪರಿಷ್ಕರಿಸಲಾಗಿತ್ತು.

ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ

ನಮ್ಮ ಮೆಟ್ರೋದ ಪ್ರಯಾಣದರವನ್ನು ಏರಿಸುತ್ತಿದ್ದಂತೆ, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಫೆಬ್ರವರಿ 10ರಂದು ಸೋಮವಾರ ಹಿಂದಿನ ವಾರಕ್ಕೆ ಹೋಲಿಸಿದರೆ 8.29 ಲಕ್ಷ ಮಂದಿ ಪ್ರಯಾಣಿಸಿದ್ದಾರೆ, ಸಂಖ್ಯೆಯಲ್ಲಿ 4ರಷ್ಟು ಕುಸಿತ ಕಂಡುಬಂದಿದೆ.

ಏರೋ ಇಂಡಿಯಾ 2025 ಇರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಪರಿಷ್ಕರಣೆಯ ನಂತರ ಕನಿಷ್ಠ ಟಿಕೆಟ್ ದರ 10 ರೂಪಾಯಿಗಳಾಗಿದ್ದು, ಗರಿಷ್ಠ ಟಿಕೆಟ್ ದರವನ್ನು ಶೇ. 50 ರಷ್ಟು ಹೆಚ್ಚಿಸಲಾಗಿದ್ದು, 60 ರೂಪಾಯಿಗಳಿಂದ 90 ರೂಪಾಯಿಗಳಿಗೆ ಏರಿಕೆಯಾಗಿದೆ.

ಕಾಂಗ್ರೆಸ್ ಪ್ರತಿಭಟನೆ

ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್​ ಪ್ರತಿಭಟನೆ ಆರಂಭಿಸಿದೆ. ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಶಿಫಾರಸ್ಸಿನಂತೆ ಮೋದಿ ಸರ್ಕಾರ ದರ ಏರಿಕೆ ಮಾಡಿದೆ. ಅವೈಜ್ಞಾನಿಕವಾಗಿ ದರವನ್ನು ಏರಿಕೆ ಮಾಡಲಾಗಿದೆ. ಈ ಸತ್ಯವನ್ನು ಮುಚ್ಚಿಟ್ಟಿರುವ ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ದರ ಪರಿಷ್ಕರಣೆ ಪಟ್ಟಿ

ದರ ಪರಿಷ್ಕರಣೆಗೆ ಒಪ್ಪಿಗೆ ಕೊಟ್ಟವರು ಯಾರ್ಯಾರು?

ಶ್ರೀನಿವಾಸ ಕಾಟಿಕಿತ್ತಲ(ಐಎಎಸ್), ಜೈದೀಪ್ ನಗರ ಸಾರಿಗೆ ವಿಶೇಷ ಅಧಿಕಾರಿ, ಅಜಿತ್ ಶಮಾ ದೆಹಲಿ ಮೆಟ್ರೋ ನಿಗಮ ನಿರ್ದೇಶಕರು, ಸಂದೀಪ್ ಮಾಥೂರ್ ರೈಲ್ವೆ ಮಂಡಳಿ, ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ, ಎಂ ನಾಗರಾಜ್, ಬಿಎಂಆರ್​ಸಿಎಲ್ ಅಧ್ಯಕ್ಷ, ಉಮಾಶಂಕರ್ ಎಸ್​ ಆರ್​(ಐಎಎಸ್), ಅತೀಕ್ ಎಲ್​ಕೆ ಐಎಎಸ್,  ಎಕ್ರೂಪ್ ಕೌರ್, ಐಎಎಸ್, ರಾಜೇಂದ್ರ ಚೋಳನ್ ಐಎಎಸ್, ಎಂ ಮಹೇಶ್ವರ ರಾವ್ ಐಎಎಸ್, ಎನ್ಎಂದೋಖೆ, ಬಿಎಂಆರ್ಸಿಎಲ್ ನಿರ್ದೇಶಕ, ಡಿ ರಾಧಾಕೃಷ್ಣ ರೆಡ್ಡಿ, ಬಿಎಂಆರ್​ಸಿಎಲ್ ಯೋಜನಾ ನಿರ್ದೇಶಕ, ಎಸ್ ಶಿವಮಾಥನ್ ಬಿಎಂಆರ್​ಸಿಎಲ್ ಮುಖ್ಯ ಹಣಕಾಸು ಅಧಿಕಾರಿ, ಸುಮಿತ್ ಭಟ್ನಾಗರ್ ಬಿಎಂಆರ್​ಸಿಎಲ್ ಕಾರ್ಯಾಚರಣೆ, ನಿರ್ವಹಣಾ ನಿರ್ದೇಶಕರು ಇವರೆಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ತೇಜಸ್ವಿ ಸೂರ್ಯ ಹೇಳಿದ್ದೇನು?

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್‌ನಲ್ಲಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೊ ಪ್ರಯಾಣದ ದರ ಏರಿಕೆಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. ಮೆಟ್ರೊ ರೈಲಿನಲ್ಲಿ ಕಡಿಮೆ ಅಂತರದ ದೂರ ಪ್ರಯಾಣ ಮಾಡುವವರೂ ಮೊದಲು ಪಾವತಿಸುವುದಕ್ಕಿಂತ ದ್ವಿಗುಣ ಹಣ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೊ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ. ಕಡಿಮೆ ಅಂತರದ ಪ್ರಯಾಣ ಮಾಡುವವರಿಗೂ ಶೇ 100ರಷ್ಟು ಏರಿಕೆಯಾಗಿದೆ. ನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆಯಾಗುವ ಬದಲು ದರ ಏರಿಕೆಯಿಂದಾಗಿ ಮೆಟ್ರೊ ಸಂಪರ್ಕವಿರುವ ನಗರಗಳಲ್ಲೇ ಬೆಂಗಳೂರು ಮೆಟ್ರೊ ದುಬಾರಿಯಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ. ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ಅವರು ನಿಗಮದ ಈಗಿನ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರ ಸ‍್ಥಾನದಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿದ್ದಾರೆ. ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:11 pm, Wed, 12 February 25