ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ : ಕಾನೂನು ಸಮರಕ್ಕಿಳಿದ ತೇಜಸ್ವಿ ಸೂರ್ಯ
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ ಮಾಡುತ್ತಿವೆ. ಈ ನಡುವೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ದರ ನಿಗದಿ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ ಏರಿಕೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಬಿಎಂಆರ್‌ಸಿಎಲ್ ಜಾಹೀರಾತುಗಳ ಮೂಲಕ ಆರ್ಥಿಕ ನಷ್ಟವನ್ನು ತುಂಬಲು ಯತ್ನಿಸುತ್ತಿದೆ.

ಬೆಂಗಳೂರು, ಜುಲೈ 06: ಬೆಂಗಳೂರು (Bengaluru) ನಮ್ಮ ಮೆಟ್ರೋ ಟಿಕೆಟ್ ದರ (Namma Metro Ticket Price) ಏರಿಕೆ ಖಂಡಿಸಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿದರೇ, ಕೇಂದ್ರ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿತ್ತು. ಸರ್ಕಾರಗಳ ಆರೋಪ-ಪ್ರತ್ಯಾರೋಪದಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದ್ದು, ದರ ಏರಿಕೆ ಮಾಡಿದ್ದು ಯಾರು? ಎಂಬ ಪ್ರಶ್ನೆ ಉದ್ಭವಾಗಿದೆ. ಈ ನಡುವೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾನೂನು ಸಮರಕ್ಕೆ ಇಳಿದಿದ್ದು, ದರ ನಿಗದಿ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ದರ ನಿಗದಿ ಸಮಿತಿ ವರದಿ ತಯಾರಿಸುವ ಮುನ್ನ ವಿದೇಶ ಪ್ರವಾಸ ಮಾಡಿತ್ತು. ಬಿಎಂಆರ್‌ಸಿಎಲ್ ಶೇ.130 ರಷ್ಟು ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಿಸಿತ್ತು. ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕುಸಿದಿತ್ತು. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ. ಹೀಗಾಗಿ, ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ (ಜು.07) ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.
ಟ್ವಿಟರ್ ಪೋಸ್ಟ್
I am moving the High Court of Karnataka to challenge the arbitrary and opaque conduct by the State government and BMRCL in not making public the Metro Fare Fixation Committee Report. The matter will be heard tomorrow – WP No. 19524/2025 (GM-RES) LS Tejasvi Surya v. BMRCL & Ors.…
— Tejasvi Surya (@Tejasvi_Surya) July 6, 2025
ಮೆಟ್ರೋ ಒಳಗೂ, ಹೊರಗೂ ಜಾಹೀರಾತು
ಮೆಟ್ರೋ ಟಿಕೆಟ್ ಏರಿಕೆ ಆದ ಮೇಲೆ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಇದರಿಂದ ಬಿಎಂಆರ್ಸಿಎಲ್ಗೆ ನಷ್ಟ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಬಿಎಂಆರ್‌ಸಿಎಲ್ ಜಾಹೀರಾತುಗಳ ಮೊರೆ ಹೋಗಿದ್ದು, ಮೆಟ್ರೋ ಒಳಗೆ ಮತ್ತು ಹೊರಗೆ ಬಣ್ಣ ಬಣ್ಣದ ಜಾಹೀರಾತುಗಳು ಕಾಣಿಸುತ್ತಿವೆ. ಆರ್ಥಿಕ ಹೊಡೆತದಿಂದ ಹೊರಬರಲು ಬಿಎಂಆರ್ಸಿಎಲ್ನ ಮುಂದಿರುವ ಆಯ್ಕೆ ಸದ್ಯ ಜಾಹೀರಾತು ಎಂಬಂತಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ: ಸಮಿತಿ ವರದಿ ಬಹಿರಂಗಪಡಿಸುವಂತೆ ತೇಜಸ್ವಿ ಸೂರ್ಯ ಒತ್ತಾಯ
ಬೆಂಗಳೂರಿನಲ್ಲಿ ಸದ್ಯ 57 ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿವೆ. 57 ರೈಲುಗಳಲ್ಲೂ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಲಾಗಿದ್ದು, ಈ ಪೈಕಿ ನೇರಳೆ ಮಾರ್ಗದ 33 ಹಾಗೂ ಹಸಿರು ಮಾರ್ಗದಲ್ಲಿ 24 ರೈಲುಗಳಿಗೆ ಜಾಹೀರಾತು ಅಳವಡಿಸಲಾಗುತ್ತಿದೆ. ರೈಲುಗಳ ಒಳಭಾಗ ಮತ್ತು ಹೊರಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ಜಾಹೀರಾತು ಇರಲಿಲ್ಲ. ಇನ್ಮುಂದೆ ಎಲ್ಲ ರೈಲುಗಳ ಒಳಭಾಗ ಹಾಗೂ ಹೊರಭಾಗದಲ್ಲಿ ಜಾಹೀರಾತು ಅಳವಡಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದರು.







