ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ: ಸಮಿತ ವರದಿ ಬಹಿರಂಗಪಡಿಸುವಂತೆ ತೇಜಸ್ವಿ ಸೂರ್ಯ ಒತ್ತಾಯ
ಬೆಂಗಳೂರಿನ ನಮ್ಮ ಮೆಟ್ರೋದ ಪ್ರಯಾಣ ದರದಲ್ಲಿ ಶೇ. 71ರಷ್ಟು ಏರಿಕೆಯಾಗಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹೆಚ್ಚಳದ ಹಿನ್ನೆಲೆಯಲ್ಲಿ, ದರ ನಿಗದಿ ಸಮಿತಿಯ ವರದಿಯನ್ನು ಬಿಡುಗಡೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದಾರೆ. ಅವರು ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೋಗಳು ತಮ್ಮ ದರ ನಿಗದಿ ವರದಿಗಳನ್ನು ಸಾರ್ವಜನಿಕಗೊಳಿಸಿರುವ ಉದಾಹರಣೆಯನ್ನು ನೀಡಿದ್ದಾರೆ ಮತ್ತು ಬೆಂಗಳೂರು ಮೆಟ್ರೋ ಕೂಡ ಅದೇ ರೀತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 28: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋ (Namma Metro) ಪ್ರಯಾಣದ ದರವನ್ನು ಏರಿಕೆ ಮಾಡಿದೆ. ಪ್ರಯಾಣದ ದರ ಏರಿಕೆ ಮೆಟ್ರೋ ಪ್ರಯಾಣಕರಿಗೆ ಹೊರೆಯಾಗಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ದರ ನಿಗದಿ ಸಮಿತಿ (FFC) ಸಲ್ಲಿಸಿರುವ ವರದಿಯನ್ನು ಬಿಡುಗಡೆಗೊಳಿಸುವಂತೆ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
“ಬಿಎಂಆರ್ಸಿಎಲ್ ನಿರ್ವಹಿಸುವ ಮೆಟ್ರೋ ರೈಲುಗಳಿಗೆ ಪರಿಷ್ಕೃತ ದರ ರಚನೆಯನ್ನು ಶಿಫಾರಸು ಮಾಡಲು 2024ರ ಸೆಪ್ಟೆಂಬರ್ 7 ರಂದು ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ನಿಗದಿ ಸಮಿತಿಯನ್ನು ರಚಿಸಿದ್ದು, ನಿಮಗೆ ತಿಳಿದಿದೆ. ಈ ದರ ನಿಗದಿ ಸಮಿತಿಯು 2024ರ ಡಿಸೆಂಬರ್ 12 ರಂದು ಪರಿಷ್ಕೃತ ದರ ರಚನೆ ವರದಿಯನ್ನು ಸಲ್ಲಿಸಿತು” ಎಂದಿದ್ದಾರೆ.
“ನಮ್ಮ ಮೆಟ್ರೋ ಪ್ರಯಾಣ ದರ ಶೇ 71 ರಷ್ಟು ಹೆಚ್ಚಾಗಿದ್ದು, ನಮ್ಮ ಮೆಟ್ರೋ ಪ್ರಯಾಣ ದರ ಈಗ ದೇಶದಲ್ಲಿ ಅತ್ಯಂತ ದುಬಾರಿಯಾಗಿದೆ. ಇದು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ನಾಗರಿಕರು ಹೆಚ್ಚಿನ ಪಾರದರ್ಶಕತೆ ಮತ್ತು ದರ ನಿಗದಿ ಸಮಿತಿಯ ಶಿಫಾರಸನ್ನು ಬಹಿರಂಗಪಡಿಸುವಂತೆ ಕೋರಿದ್ದಾರೆ. ಆದಾಗ್ಯೂ, ಬಿಎಂಆರ್ಸಿಎಲ್ ಇಲ್ಲಿಯವರೆಗೂ ದರ ನಿಗದಿ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಅಥವಾ ಅದನ್ನು ಸಾರ್ವಜನಿಕ ವೀಕ್ಷಣೆಗಾಗಿ ಬಿಎಂಆರ್ಸಿಎಲ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಗುಂಡಿ, ಧೂಳಿನಿಂದ ಕೂಡಿದ ಬೆಂಗಳೂರಿನ ರಸ್ತೆಗಳು: ಡಿಕೆ ಶಿವಕುಮಾರ್ಗೆ ತೇಜಸ್ವಿ ಸೂರ್ಯ ಪತ್ರ
“ದೆಹಲಿ ಮೆಟ್ರೋ ಪ್ರಯಾಣದ ದರ ಪರಿಷ್ಕರಣೆ ವಿಚಾರವಾಗಿ, ನಾಲ್ಕು ವಿಭಿನ್ನ ಸಂದರ್ಭಗಳಲ್ಲಿ ರಚಿಸಲಾದ ದರ ನಿಗದಿ ಸಮಿತಿಯ ವರದಿಗಳನ್ನು ದೆಹಲಿ ಮೆಟ್ರೋ ರೈಲು ನಿಗಮ (DMRC) ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಅಪ್‌ಲೋಡ್ ಮಾಡಿದೆ. ಅದೇ ರೀತಿ, ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಮೆಟ್ರೋ ರೈಲು ಸಂಸ್ಥೆಗಳು ಸಹ ಆಯಾ ದರ ನಿಗದಿ ಸಮಿತಿ ವರದಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಿಡುಗಡೆ ಮಾಡುವ ಮೂಲಕ, ದರ ಪರಿಷ್ಕರಣೆ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಗಳಿಸಿಕೊಂಡಿವೆ” ಎಂದರು.
ಟ್ವಿಟರ್ ಪೋಸ್ಟ್
Raised the issue of the unreleased Fare Fixation Committee report during the consultation meeting with @OfficialBMRCL on Phase 3 Metro alignment.
Despite a steep fare hike of up to 71%, making Namma Metro the most expensive in the country, BMRCL has not made the FFC report… pic.twitter.com/npPD2Qxlbf
— Tejasvi Surya (@Tejasvi_Surya) April 28, 2025
“ಈ ಹಿನ್ನೆಲೆಯಲ್ಲಿ, ಬಿಎಂಆರ್ಸಿಎಲ್ ಕೂಡ ದರ ನಿಗದಿ ಸಮಿತಿ ವರದಿಯನ್ನು ಸಾರ್ವಜನಿಕ ವಲಯದಲ್ಲಿ ತಕ್ಷಣ ಬಿಡುಗಡೆ ಮಾಡಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಹಾಗೆ ಮಾಡುವುದರಿಂದ ಸಾರ್ವಜನಿಕರ ನಂಬಿಕೆ ಗಳಿಸಿಕೊಳ್ಳಲು ಮತ್ತು ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿಮ್ಮ ಹೊಣೆಗಾರಿಕೆ ಬಗ್ಗೆ ತಿಳಿಯುತ್ತದೆ” ಎಂದು ಒತ್ತಾಯಿಸಿದರು.








