ಬಿಬಿಎಂಪಿ ಶಾಲಾ ಮಕ್ಕಳಿಗೆ ಇನ್ನೂವರೆಗೂ ವಿತರಣೆಯಾಗದ ಶೂ, ಸಮವಸ್ತ್ರ: ಕಾರಣ ರಿವೀಲ್
ಬಿಬಿಎಂಪಿ ಶಾಲೆಗಳಲ್ಲಿ 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮವಸ್ತ್ರ ಮತ್ತು ಶೂಗಳಿಗಾಗಿ ಕಾಯುತ್ತಿದ್ದಾರೆ. ಜೂನ್‌ನಲ್ಲಿ ಆರಂಭವಾದ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಶಾಲೆಗಳು ಆರಂಭವಾದ ಒಂದು ತಿಂಗಳಾದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಬೂಟುಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಪಾಲಿಕೆ ಅಧಿಕಾರಿಗಳು ಶೀಘ್ರದಲ್ಲೇ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು, ಜುಲೈ 07: ಬೇಸಿಗೆ ಕಳೆದು ಶಾಲೆಗಳು ಆರಂಭವಾಗಿ ಒಂದು ತಿಂಗಳು ಕಳೆದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಶಾಲೆ ಮಕ್ಕಳಿಗೆ ಸಮವಸ್ತ್ರ (Uniform), ಶೂ ಇನ್ನೂವರೆಗೂ ವಿತರಣೆಯಾಗಿಲ್ಲ. ಇದಕ್ಕೆ ಕಾರಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದು. ಬಿಬಿಎಂಪಿ ಶೂ ಮತ್ತು ಸಮವಸ್ತ್ರದ ಟೆಂಡರ್ ಜೂನ್ನಲ್ಲೇ ಕರೆದಿದೆ. ಈ ಟೆಂಡರ್ ಪಡೆಯಲು ಕಂಪನಿಗಳು ಮುಂದೆ ಬಂದಿವೆ. ಆದರೆ, ಯಾವ ಕಂಪನಿಗೆ ಟೆಂಡರ್ ನೀಡಬೇಕೆಂದು ಬಿಬಿಎಂಪಿ ಇನ್ನೂ ಅಂತಿಮಗೊಳಿಸಿಲ್ಲ. ಹೀಗಾಗಿ, ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆಯಾಗಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ಶೂಗಾಗಿ ಇನ್ನೊಂದು ತಿಂಗಳು ಕಾಯಬೇಕಾಗಿದೆ. ಸದ್ಯ, ವಿದ್ಯಾರ್ಥಿಗಳು ಹಳೆಯ ಶೂ ಮತ್ತು ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.
ಬಿಬಿಎಂಪಿಯ 93 ಶಿಶುವಿಹಾರ, 17 ಪ್ರಾಥಮಿಕ ಶಾಲೆ, 35 ಪ್ರೌಢಶಾಲೆ, 20 ಪಿಯು ಕಾಲೇಜು, 6 ಸ್ನಾತಕೋತ್ತರ ಪದವಿ ಕಾಲೇಜುಗಳಿವೆ. ಬಿಬಿಎಂಪಿ ಶಾಲೆಗಳಿಗೆ ಪ್ರಸಕ್ತ ವರ್ಷ 22 ಸಾವಿರಕ್ಕೂ ಅಧಿಕ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಈಗಾಗಲೇ ಶಾಲೆಗಳು ಆರಂಭಗೊಂಡು 35 ದಿನ ಕಳೆದಿವೆ. ಆದರೂ ಕೂಡ ಬಿಬಿಎಂಪಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆಯಾಗಿಲ್ಲ. ಪ್ರತಿಬಾರಿ ಸಮವಸ್ತ್ರ, ಶೂ ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದ ಪಾಲಿಕೆ ಈ ಬಾರಿಯೂ ಕೂಡ ತನ್ನ ಹಳೇ ಚಾಳಿ ಮುಂದುವರಿಸಿದೆ. ವಿದ್ಯಾರ್ಥಿಗಳು ಹೊಸ ಶೂ, ಸಮವಸ್ತ್ರ ಧರಿಸಲು ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.
ಇದನ್ನೂ ಓದಿ: ಬೆಂಗಳೂರು ಹೊರವಲಯದ ಪಾರ್ಟಿಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು: ಡ್ರಗ್ಸ್ ಕಂಡುಬಂದರೆ ರೆಸಾರ್ಟ್, ಹೋಂ ಸ್ಟೇ ಮಾಲೀಕರ ಮೇಲೂ ಕೇಸ್
ಬಿಬಿಎಂಪಿಯ ಶಾಲಾ-ಕಾಲೇಜಿಗೆ ಜುಲೈ 31ರವರೆಗೆ ದಾಖಲಾತಿಗೆ ಅವಕಾಶ ಇದೆ. ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆ ಇದೆ. ಕಂಪನಿಗಳಿಂದ ಶೂ, ಸಮವಸ್ತ್ರಗಳ ಸ್ಯಾಂಪಲ್ ಪಡೆಯಲಾಗಿದೆ. ಸಮಿತಿ ನೇತೃತ್ವದಲ್ಲಿ ಯಾವ ಕಂಪನಿಗೆ ಟೆಂಡರ್ ನೀಡಬೇಕು ಎಂದು ಫೈನಲ್ ಮಾಡಿದ ಮೇಲೆ ಸಮವಸ್ತ್ರ, ಶೂ ಖರೀದಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಬಿಬಿಎಂಪಿಯ ಶಾಲೆಗಳಲ್ಲಿ 22 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದು, ಬಿಬಿಎಂಪಿ ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಶೂ, ಸಮವಸ್ತ್ರ ವಿತರಿಸುತ್ತಾ ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Mon, 7 July 25