ಸಚಿವ ಎಂಬಿ ಪಾಟೀಲ್ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್
ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಕೂಡ ಕೆಲವು ದಿನಗಳಿಂದ ಭಾಗಿಯಾಗಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಚಿವ ಎಂಬಿ ಪಾಟೀಲ್, ಅವರು (ಪ್ರಕಾಶ್ ರೈ) ಬೇರೆ ಕಡೆ ಹೋರಾಟ ಮಾಡಲಿ ಎಂದಿದ್ದರು. ಅದಕ್ಕೀಗ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.
ದೇವನಹಳ್ಳಿ, ಜುಲೈ 7: ದೇವನಹಳ್ಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನಟ ಪ್ರಕಾಶ್ ರೈ ಇದೀಗ ಸಚಿವ ಎಂಬಿ ಪಾಟೀಲ್ಗೆ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರೈ ಬೇರೆ ಕಡೆ ಹೋರಾಟ ಮಾಡಲಿ ಎಂದು ಎಂಬಿ ಪಾಟೀಲ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ವಿಡಿಯೋ ಬಿಡುಗಡೆ ಮಾಡಿರುವ ಪ್ರಕಾಶ್ ರೈ, ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಇಲ್ಲಿಯೇ ಹೋರಾಟ ಮಾಡಬೇಕು. ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದೇನೆ. ಪಂಜಾಬ್ನಲ್ಲಿ ರೈತರು ಹೋರಾಟ ಮಾಡಿದಾಗಲೂ ಭಾಗವಹಿಸಿದ್ದೆ. ಪ್ರಧಾನಿ ಮೋದಿಗೆ ನಿಮಗಿಂತ ಹೆಚ್ಚು ಪ್ರಶ್ನೆ ಮಾಡುವವನು ನಾನೇ ಎಂದು ಹೇಳಿದ್ದಾರೆ.
ಆಯಾ ಹೋರಾಟಗಳನ್ನು ಆಯಾ ರಾಜ್ಯಗಳಲ್ಲೇ ನಾವು ಮಾಡುತ್ತೇವೆ. ನಾವು ಯಾವ ಪಕ್ಷದವರೂ ಅಲ್ಲ, ಜನರ ಪಕ್ಷದವರು. ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಜವಾಬ್ದಾರಿಯಿಂದ ಮಾತನಾಡಿ. ದೇವನಹಳ್ಳಿ ರೈತರ ವಿಚಾರವಾಗಿ ಕಾನೂನು ರೀತಿ ಪರಿಹಾರ ಹುಡುಕಿ. ನಿಮ್ಮ ಕಡೆಯಿಂದ ಆಗದಿದ್ದರೆ ನಮ್ಮ ಬಳಿಯೇ ಬನ್ನಿ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಕೆಐಎಡಿಬಿ ಭೂಸ್ವಾಧೀನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸಿ. ನಮ್ಮ ಬಳಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರಿದ್ದಾರೆ. ಅವರ ಬಳಿ ಸಲಹೆ ಕೇಳೋಣ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ದೇವನಹಳ್ಳಿ ಭೂಸ್ವಾಧೀನ ವಿವಾದದ ಹಿನ್ನೆಲೆಯೇನು? ಶುರುವಾಗಿದ್ದೇಕೆ?
ಉದ್ದೇಶಿತ ಏರೋಸ್ಪೇಸ್ ಮತ್ತು ಟೆಕ್ ಪಾರ್ಕ್‌ಗಾಗಿ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಹಳ್ಳಿಗಳ ರೈತರ ಭೂಸ್ವಾಧೀನ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿತ್ತು. ಭೂಸ್ವಾಧೀನಕ್ಕೆ 13 ಗ್ರಾಮಗಳ ರೈತರು ಆಕ್ಷೇಪ ವ್ಯಕ್ತಪಡಿಸಿದ್ದು, ಲಿಖಿತವಾಗಿ ಅಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ, ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟಾಗಿಯೂ ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದರ ಬೆನ್ನಲ್ಲೇ ರೈತರು ಹಾಗೂ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಇದೀಗ ರೈತರ ಹಾಗೂ ಸ್ಥಳೀಯರ ಹೋರಾಟಕ್ಕೆ ಪ್ರಕಾಶ್ ರೈ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.