ಜುಲೈ 8 ರಂದು ರಾಜ್ಯದ 10 ಮಹಾನಗರ ಪಾಲಿಕೆಗಳು ಬಂದ್..! ಇಲ್ಲಿದೆ ಕಾರಣ
ಬಿಬಿಎಂಪಿ ಸೇರಿದಂತೆ 10 ಮಹಾನಗರ ಪಾಲಿಕೆಗಳ ನೌಕರರು ಜುಲೈ 8 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ. 6000 ಕ್ಕೂ ಹೆಚ್ಚು ಖಾಲಿ ಹುದ್ದೆಗಳು, ಲಾಗ್‌ಸೇಫ್ ಹಾಜರಾತಿ ಪದ್ಧತಿ, ಅನಧಿಕೃತ ಅಮಾನತುಗಳು ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಬೇಡಿಕೆಗಳನ್ನು ಇಡೇರಿಸುವಂತೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಬೆಂಗಳೂರು, ಜುಲೈ 05: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳ (Municipal Corporation) ನೌಕರರು ಮಂಗಳವಾರ (ಜು.08) ರಂದು ಸಾಮೂಹಿಕ ರಜೆ ಹಾಕಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಪಾಲಿಕೆ ನೌಕರರ ಪ್ರತಿಭಟನೆಗೆ ಕಾರಣವೇನು?
“ಬಿಬಿಎಂಪಿಯಲ್ಲಿ ಸುಮಾರು 6000 ಕ್ಕೂ ಮೇಲ್ಪಟ್ಟು ವಿವಿಧ ವೃಂದದ ಅಧಿಕಾರಿ /ನೌಕರರ ಹುದ್ದೆಗಳು ಖಾಲಿಯಿವೆ. ಹೀಗಾಗಿ, ಹಾಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಯಾವುದೇ ನೋಟಿಸ್ ನೀಡದೆ ನೌಕರರನ್ನು ಅಮಾನತ್ತು ಮಾಡಿರುವುದನ್ನು, ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ರೀತಿ ಕ್ರಮ ವಹಿಸಿಲ್ಲ” ಎಂದು ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಸ್ಟಿಕ್ಕರ್ ಅಂಟಿಸಲು ಕೊಟ್ಯಂತರ ರೂ ಖರ್ಚು: ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ
ನೌಕರರ ಬೇಡಿಕೆಗಳು
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ನೌಕರರು/ ಮಾಲಿ/ ಗ್ಯಾಂಗ್ ಮೆನ್ಗಳು Non Executive ಆಗಿದ್ದು, Logsafe ಪದ್ಧತಿಯಲ್ಲಿ ಹಾಜರಾತಿ ಸಲ್ಲಿಸಲು ಕಷ್ಠಕರವಾಗುತ್ತಿರುವುದರಿಂದ ಕೂಡಲೇ ಬಿಬಿಎಂಪಿ ಅಧಿಕಾರಿ/ನೌಕರರಿಗೆ ಜಾರಿ ಮಾಡಿರುವ Logsafe ಹಾಜರಾತಿ ಪದ್ಧತಿಯನ್ನು ಕೂಡಲೇ ಕೈ ಬಿಡಬೇಕು.
- ಬಿಬಿಎಂಪಿ 225 ವಾರ್ಡ್ಗಳಲ್ಲಿ ಖಾಲಿ ಇರುವ 6000ಕ್ಕೂ ಅಧಿಕ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು.
- ಬಿಬಿಎಂಪಿ ವಿದ್ಯಾ ಇಲಾಖೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಯರುರವರ ಮೇಲೆ ಕ್ಷುಲಕ ಕಾರಣಕ್ಕೆ ಕರ್ತವ್ಯ ಲೋಪದ ಅಡಿಯಲ್ಲಿ ಕಾನೂನು ಬಾಹಿರವಾಗಿ ಇಲಾಖಾ ವಿಚರಣೆ ಜರುಗಿಸುತ್ತಿರುವುದನ್ನು ಕೂಡಲೇ ಕೈ ಬಿಡಬೇಕು.
- ವಿಶೇಷ ಆಯುಕ್ತ (ಆಡಳಿತ) ರನ್ನು ಯಾವುದೇ ವಲಯಕ್ಕೆ ನೇಮಿಸದೆ ವಿಶೇಷ ಆಯುಕ್ತರು (ಆಡಳಿತ) ಹುದ್ದೆಯಲ್ಲಿ ಮಾತ್ರ ನೇಮಿಸುವುದು. ಹಾಗೂ ಮುಖ್ಯ ಆಯುಕ್ತರ ಅಧಿಕಾರ ಪ್ರತ್ಯೋಜನೆಯನ್ನು ವಿಶೇಷ ಆಯುಕ್ತರು (ಆಡಳಿತ) ಉಪ ಆಯುಕ್ತರು (ಆಡಳಿತ) ರವರು ಕಟ್ಟು ನಿಟ್ಟಾಗಿ ಪಾಲಿಸಲು ಆದೇಶಿಸಬೇಕು.
- ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಯಿಂದ ಕಾರ್ಯಕಲಾಪ ಹುದ್ದೆಗೆ ಮುಂಬಡ್ತಿ ಹಾಗೂ ಕಾರ್ಯಪಾಲ ಅಭಿಯಂತರರ ಹುದ್ದೆಯಿಂದ ಅಧೀಕ್ಷಕ ಅಭಿಯಂತರರ ಹುದ್ದೆಗೆ ಕೂಡಲೇ ಮುಂಬಡ್ತಿ ನೀಡಬೇಕು.
- ಬಿಬಿಎಂಪಿ ಕಂದಾಯ ಇಲಾಖೆಯಲ್ಲಿ ಖಾತಾ ವರ್ಗಾವಣೆ/ ಖಾತಾ ನೋಂದಣಿ/ ಖಾತಾ ವಿಭಜನೆ/ ಖಾತಾ ಹೊಂದುಗೂಡಿಸುವುದು ಇ-ಆಸ್ತಿ ಪದ್ಧತಿಯನ್ನು ನಿಯಮಾನುಸಾರ ಈ ಹಿಂದೆ ಇದ್ದ ಪದ್ಧತಿಯಲ್ಲಿಯೇ ಮುಂದುವರೆಸಬೇಕು.
- ಬಿಬಿಎಂಪಿಯಲ್ಲಿ ಕಾನೂನು ಬಾಹಿರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಮಾತೃ ಇಲಾಖೆಗೆ ಹಿಂತಿರುಗಿಸಬೇಕು.
- ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೃಂದದ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡಬೇಕು.
- ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಆರೋಗ್ಯ ಸೌಲಭ್ಯ/ಯೋಜನೆಯನ್ನು ಬಿಬಿಎಂಪಿ ಅಧಿಕಾರಿ / ನೌಕರರಿಗೂ ಜಾರಿ ಮಾಡಬೇಕು.
- ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ/ನೌಕರರ ಸೇವಾ ಜೇಷ್ಠತಾಪಟ್ಟಿಯನ್ನು ಪ್ರಚಾರ / ಅಂತಿಮಗೊಳಿಸಬೇಕು.
- ಬಿಬಿಎಂಪಿಯ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಲ್ತ್ ಸೂಪರ್ ವೈಸರ್ ಗಳು “ಬಿ” ಶ್ರೇಣಿ ಅಧಿಕಾರಿಗಳಾಗಿದ್ದು, ಇವರಿಗೆ ಉದ್ದಿಮೆ ಪರವಾನಿಗಿಯ (User ID Passwor) ನೀಡಬೇಕು.
- ಬಿಬಿಎಂಪಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮಾರ್ಷಲ್ಗಳ ಹುದ್ದೆಗಳನ್ನು ಈ ಕೂಡಲೇ ರದ್ದುಪಡಿಸಬೇಕು.
ಯಾವ್ಯಾವ ಪಾಲಿಕೆ ನೌಕರರಿಂದ ಮುಷ್ಕರ?
- ಬಿಬಿಎಂಪಿ
- ಹುಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
- ತುಮಕೂರು ಮಹಾನಗರ ಪಾಲಿಕೆ
- ಮಂಗಳೂರು ಮಹಾನಗರ ಪಾಲಿಕೆ
- ಶಿವಮೊಗ್ಗ ಮಹಾನಗರ ಪಾಲಿಕೆ
- ದಾವಣಗೆರೆ ಮಹಾನಗರ ಪಾಲಿಕೆ
- ಮೈಸೂರು ಮಹಾನಗರ ಪಾಲಿಕೆ
- ಬೆಳಗಾವಿ ಮಹಾನಗರ ಪಾಲಿಕೆ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Sat, 5 July 25