ಪರಿಶಿಷ್ಟ ಜಾತಿ ಅಲೆಮಾರಿ ಮುಖಂಡರ ಸಭೆಯಲ್ಲಿ ಗಲಾಟೆ: ಅಧ್ಯಕ್ಷೆ ಸೀರೆ ಎಳೆದು ಹಲ್ಲೆ ಆರೋಪ
ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಅಲೆಮಾರಿ ಮುಖಂಡರ ಸಭೆಯಲ್ಲಿ ಗಲಾಟೆ ಉಂಟಾಗಿದೆ. ಬಿಜೆಪಿ ವಕ್ತಾರರಿಗೆ ಅವಕಾಶ ನೀಡಿದ್ದಕ್ಕೆ ಆಕ್ಷೇಪಿಸಿ ಮುಖಂಡರು ಗಲಾಟೆ ಮಾಡಿದ್ದಾರೆ. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮೇಲೆ ಹಲ್ಲೆ ಮಾಡಿ, ಸೀರೆ ಎಳೆದಾಡಿರುವ ಆರೋಪ ಕೇಳಿಬಂದಿದ್ದು, ಏಳು ಜನರ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು, ಜುಲೈ 06: ಕರ್ನಾಟಕ ಪರಿಶಿಷ್ಟ ಜಾತಿ (Scheduled Caste) ಅಲೆಮಾರಿ ಅಭಿವೃದ್ಧಿ ವೇದಿಕೆಯು ಶನಿವಾರ ಶಿವಾನಂದ ವೃತ್ತದ ಬಳಿಯಿರುವ ಗಾಂಧಿ ಭವನದಲ್ಲಿ ಅಲೆಮಾರಿ ಮುಖಂಡರ ಸಭೆ ಮಾಡಲಾಗಿದೆ. ಈ ವೇಳೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರ ಸೀರೆ ಎಳೆದು ಹಲ್ಲೆಗೈದ ಆರೋಪ ಕೇಳಿಬಂದಿದೆ. ಸದ್ಯ ಠಾಣೆ ಮೆಟ್ಟಿಲೇರಿರುವ ಪ್ರಕರಣ 7 ಜನರ ವಿರುದ್ಧ ದಲಿತ ನಾಯಕಿ ಪ್ರಭಾವತಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು (complaint) ನೀಡಿದ್ದಾರೆ.
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಗಲಾಟೆ
ನಿನ್ನೆ ನಡೆದ ಸಭೆಯಲ್ಲಿ ಬಿಜೆಪಿ ವಕ್ತಾರ ಬಿ.ಆರ್.ಲೋಹಿತ್ಗೆ ಮಾಜಿ ಸಚಿವ ಹೆಚ್.ಆಂಜನೇಯ ಅವಕಾಶ ನೀಡಿದ್ದರು. ಹೀಗಾಗಿ ಹೆಚ್.ಆಂಜನೇಯ ವಿರುದ್ಧ ಪರಿಶಿಷ್ಟ ಜಾತಿ ಅಲೆಮಾರಿ ಮುಖಂಡರು ಘೋಷಣೆ ಕೂಗಿದ್ದಾರೆ. ಬಿಜೆಪಿ ವಕ್ತಾರನಿಗೆ ಅವಕಾಶ ನೀಡಿದ್ದಕ್ಕೆ ಕೆರಳಿದ ಅಲೆಮಾರಿ ಮುಖಂಡರು ಗಲಾಟೆ ಮಾಡಿದರು. ಅಲೆಮಾರಿ ಜನಾಂಗದ ಪರವಾಗಿ ಪಲ್ಲವಿ ಮಾತನಾಡುತ್ತಿದ್ದು, ಅವರಿಗೆ ಬಿ.ಆರ್.ಲೋಹಿತ್ ಅವಾಚ್ಯವಾಗಿ ನಿಂದಿಸಿ, ಸಾರ್ವಜನಿಕ ಸ್ಥಳದಲ್ಲಿ ಸೀರೆ ಎಳೆದು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿಯಲ್ಲಿ ವರುಣನ ಆರ್ಭಟ ಜೋರು, ಜುಲೈ 12ರವರೆಗೂ ಭಾರಿ ಮಳೆ
ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತಾನಾಡಿದ್ದಾರೆ. ಸಭೆಯಲ್ಲಿ ಗಲಾಟೆ ಉಂಟು ಮಾಡಿದ್ದಾರೆ. ಹಲ್ಲೆ ಮಾಡಿ, ಸಾರ್ವಜನಿಕರ ಮುಂದೆ ಅವಹೇಳನ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ನಾಯಕಿ ಪ್ರಭಾವತಿ ಒತ್ತಾಯಿಸಿದ್ದಾರೆ.
ಪ್ರಭಾವತಿ ನೀಡಿದ ದೂರಿನಲ್ಲಿ ಏನಿದೆ?
ಶ್ರೀಮತಿ ಪ್ರಭಾವತಿಯಾದ ನಾನು ಪರಿಶಿಷ್ಟ ಜಾತಿ ಅಲೆಮಾರಿ ಕೊರಮ ಜನಾಂಗಕ್ಕೆ ಸೇರಿದವಳಾಗಿದ್ದು, ನಾನು ಅಖಿಲ ಕನಾಟಕ ಕುಳುವ ಮಹಾಸಂಘದ ಬೆಂಗಳೂರು ನಗರ ಮಹಿಳಾವಿಭಾಗದ ಜಿಲ್ಲಾಧ್ಯಕ್ಷೆಯಾಗಿದ್ದು ಜುಲೈ 05ರಂದು ಗಾಂಧಿ ಭವನೆ, ಕುಮಾರ ಕೃಪ, ಬೆಂಗಳೂರು, ಶಿವಾನಂದ ಸರ್ಕಲ್ ಹತ್ತಿರ, ಇಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಆಲೆಮಾರಿ ಸಮುದಾಯಗಳ ಸಭೆಯನ್ನು ಮಾಜಿ ಸಚಿವ ಹೆಚ್. ಆಂಜನೇಯ (ಹೊಳಲ್ಕೆರೆ ಚಿತ್ರದುರ್ಗ ಜಿಲ್ಲೆ) ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಎಲ್ಲಾ ಅಲೆಮಾರಿ ಮುಖಂಡರನ್ನು ಆಹ್ವಾನಿಸಲಾಗಿದ್ದು, ಈ ಸಭೆಯು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಪಟ್ಟಿದ್ದು ಈ ಸಭೆಯಲ್ಲಿ ನಾನು ಮತ್ತು ನನ್ನ ಸಮುದಾಯದ ಅನೇಕ ಜನ ಮುಖಂಡರು ಮತ್ತು ರಾಜ್ಯಾದ್ಯಂತ ಅನೇಕ ಸಮುದಾಯಗಳ ಮುಖಂಡರು ಹಾಜರಿದ್ದರು.
ಸದರಿ ಸಭೆಯು ಸುಮಾರು ಬೆಳಿಗ್ಗೆ 11.00 ಗಂಟೆಗೆ ಪ್ರಾರಂಭವಾಗಿದ್ದು, ಮಧ್ಯಾಹ್ನದವರೆಗೆ ನಡೆದಿತ್ತು. ನಂತರ ಲೋಹಿತಾಕ್ಷ ಎಂಬುವವರು ಮೂಲತಃ ಬಿಜೆಪಿ ವಕ್ತಾರ ಆದ ಇವರು ಇದ್ದಕ್ಕಿದ್ದ ಹಾಗೆ ಸಭೆಯು ಶಾಂತಯುತವಾಗಿ ನಡೆಯುತ್ತಿದ್ದ ವೇಳೆಯಲ್ಲಿ ಎದ್ದು ನಿಂತು ವಿನಾಕಾರಣ ಕರ್ನಾಟಕ ಸರ್ಕಾರವು 51 ಪರಿಶಿಷ್ಟ ಜಾತಿಗಳನ್ನು ಗುರುತಿಸಿ ನಿಗಮ ಮಾಡಿದ್ದರು ಸಹ ಕೇವಲ 49 ಸಮುದಾಯಗಳು ಮಾತ್ರ ನೈಜ ಅಲೆಮಾರಿಳೆಂದು ಹಾಗೂ ಕೊರಮ ಮತ್ತು ಕೊರಚ ಸಮುದಾಯಗಳು ಅಲೆಮಾರಿಗಳಲ್ಲ ಎಂದು ಹೇಳಿ ಪ್ರಸ್ತಾಪಿಸಿದಾಗ ಸಭೆಯಲ್ಲಿ ಗದ್ದಲ ಉಂಟಾಗಿ ಸಭೆಯು ಮೊಟಕುಗೊಂಡಿತ್ತು. ಕೆಲ ಸಮಯದ ನಂತರ ಸಭೆಯು ಮತ್ತೆ ಆರಂಭವಾಯಿತು.
ಇದನ್ನೂ ಓದಿ: ನೈಸ್ ಯೋಜನೆಗಾಗಿ 300 ಎಕರೆಗೂ ಹೆಚ್ಚಿನ ಕೆಐಎಡಿಬಿ ಭೂಸ್ವಾಧೀನ ರದ್ದು
ಆ ಸಂಧರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಿ. ರವರು ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಲು ಮುಂದಾದಾಗ ಲೋಹಿತಾಕ್ಷ ಎಂಬುವವರು ಏಕಾಏಕಿ ನಮ್ಮ 49 ಜಾತಿಗಳಿಗೆ ಮೀಸಲಾದ ಈ ಸಭೆಯಲ್ಲಿ ನಿನಗೆ ಮಾತನಾಡಲು ಅವಕಾಶವಿರುವುದಿಲ್ಲವೆಂದು ಹೇಳಿ ಸಭೆಯಿಂದ ಹೊರಡುವಂತೆ ಏಕವಚನದಲ್ಲಿ ಹೇಳಿದ್ದಲ್ಲದೇ, ನಿನಗೆ ಯಾವಳೆ ಬರೋಕೆ ಹೇಳಿದ್ದು? ನಿನ್ನನ್ನು ಯಾರೇ ಕರೆದದ್ದು? ಎಂದು ಹೇಳಿ ಶ್ರೀಮತಿ ಪಲ್ಲವಿ ರವರ ಮೇಲೆ ಹಲ್ಲೆ ಮಾಡಿ ಅಲ್ಲದೇ ಉಟ್ಟಿರುವ ಸೀರೆ ಎಳೆದು ಸಾರ್ವಜನಿಕ ಸಭೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಣ್ಣು ಮಕ್ಕಳು ಎಂದು ಸಹ ನೋಡದೇ, ಬಟ್ಟೆ ಎಳೆದು ಏಕವಚನದಲ್ಲಿ ನಡೆಯೇ ಹೊರಗಡೆ, ಅಲೆಮಾರಿಗಳ ತಟ್ಟೆಗೆ ಕೈಹಾಕಲು ಬಂದಿರುವ ಕೊರಮ ಕೊರಚರು ಕಳ್ಳರು ಎಂದು ಬೈದಿರುತ್ತಾರೆ. ಮತ್ತು ನಿನ್ನನ್ನು ನೋಡಿಕೊಳ್ಳುತ್ತೇವೆ ಅಲ್ಲದೆ ನಿನಿನ್ನು ಜೀವಂತವಾಗಿ ಬಿಡುವುದಿಲ್ಲ ಮತ್ತು ಇನ್ನುಮುಂದೆ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.
ಈ ನಡುವೆ ರಕ್ಷಣೆಗೆ ಬಂದತಹ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ. ಎಸ್. ಆನಂದ್ ಕುಮಾರ್ ಮತ್ತು ಶ್ರೀಮತಿ ಮಾದೇವಮ್ಮ, ಶ್ರೀಕಾಂತ್, ಶ್ರೀಮತಿ ಪದ್ಮ, ಶ್ರೀಮತಿ ಚಂದ್ರಮ್ಮರವರ ಇವರುಗಳು ಗಲಾಟೆಯನ್ನು ನಿಲ್ಲಿಸುವಂತೆ ಪ್ರಯತ್ನ ಮಾಡುಲು ಮುಂದಾದಾಗ ಅವರ ಮೇಲೂ ಸಹ ಗಲಾಟೆ ಮಾಡಿ ಅವರಿಗೂ ಬೆದರಿಕೆ ಒಡ್ಡಿರುತ್ತಾರೆ. ಆದ್ದುದರಿಂದ ನಾನು ದಯಮಾಡಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸಾರ್ವಜನಿಕ ಸ್ಥಳದಲ್ಲಿ ಮತ್ತು ರಾಜ್ಯ ಮಟ್ಟದ ಅಲೆಮಾರಿ ಸಮುದಾಯಗಳಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆಯಲ್ಲಿ ನನ್ನ ಮೇಲೆ ಮಾಡಿರುವ ಹಲ್ಲೆ ಮತ್ತು ನನಗೆ ಸಾರ್ವಜನಿಕ ಸ್ಥಳದಲ್ಲಿ ಮಾಡಿರುವ ಅವಮಾನಕ್ಕೆ ಮೇಲೆ ಹೇಳಿರುವ ಸದರಿ ಆರೋಪಿತರ ವಿರುದ್ಧ ಕಾನೂನಿನ ಕ್ರಮ ಜರುಗಿಸಿ ನನಗೆ ಮತ್ತು ನನ್ನ ಸಹಾಯಕ್ಕೆ ಬಂದವರಿಗೆ ರಕ್ಷಣೆಯನ್ನು ನೀಡುವಂತೆ ಕೋರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.