ನೈಸ್ ಯೋಜನೆಗಾಗಿ 300 ಎಕರೆಗೂ ಹೆಚ್ಚಿನ ಕೆಐಎಡಿಬಿ ಭೂಸ್ವಾಧೀನ ರದ್ದು
ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಕೆಐಎಡಿಬಿ ನಡೆಸಿದ 300 ಎಕರೆಗೂ ಹೆಚ್ಚು ಭೂಸ್ವಾಧೀನ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪರಿಹಾರ ಘೋಷಣೆಯಾಗದ 50ಕ್ಕೂ ಹೆಚ್ಚು ರೈತರ ರಿಟ್ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸಿ ಈ ತೀರ್ಪು ನೀಡಿದೆ. 23 ವರ್ಷಗಳಿಂದ ಪರಿಹಾರ ವಿಳಂಬವಾಗಿರುವುದು ಈ ತೀರ್ಪಿಗೆ ಕಾರಣ. ಕೆಐಎಡಿಬಿ ವಿರುದ್ಧದ ಶಕುಂತಲಮ್ಮ ಪ್ರಕರಣದ ತೀರ್ಪು ಉಲ್ಲೇಖಿಸಲಾಗಿದೆ.

ಬೆಂಗಳೂರು, ಜುಲೈ 05: ನೈಸ್ ರಸ್ತೆ (NICE Road) ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಸ್ವಾಧೀನಪಡಿಸಿಕೊಂಡಿರುವ 300 ಎಕರೆಗೂ ಹೆಚ್ಚಿನ ಭೂಸ್ವಾಧೀನ ಅಧಿಸೂಚನೆಯನ್ನು ನ್ಯಾ.ಆರ್.ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ ರದ್ದಪಡಿಸಿದೆ. ಪರಿಹಾರ (ಅವಾರ್ಡ್) ಘೋಷಣೆಯಾಗದ 50 ರಿಟ್ ಅರ್ಜಿದಾರರಿಗೆ ಹೈಕೋರ್ಟ್ ರಿಲೀಫ್ ನೀಡಿದೆ.
ನೈಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಅಧಿಸೂಚನೆಯಾಗಿ 23 ವರ್ಷ ಕಳೆದರೂ ಪರಿಹಾರ (ಅವಾರ್ಡ್) ನಿಗದಿಯಾಗಿರಲಿಲ್ಲ. ಹೀಗಾಗಿ, 2014, 2016, 2020, 2022 ರಲ್ಲಿ 50ಕ್ಕೂ ಹೆಚ್ಚು ರೈತರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ 300 ಎಕರೆಗೂ ಹೆಚ್ಚಿನ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿದೆ. ಕೆಐಎಡಿಬಿ vs ಶಕುಂತಲಮ್ಮ ಪ್ರಕರಣದ ತೀರ್ಪು ಉಲ್ಲೇಖಿಸಿ ರೈತರ ಪರ ಹಿರಿಯ ವಕೀಲ ಹೆಚ್.ಎನ್.ಶಶಿಧರ್ ವಾದ ಮಂಡಿಸಿದರು.
ಇದನ್ನೂ ಓದಿ: ನೈಸ್ ರಸ್ತೆ ಯೋಜನೆ ಪರಿಶೀಲನೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ
ಏನಿದು ಯೋಜನೆ?
ಬೆಂಗಳೂರು-ಮೈಸೂರು ನಡುವೆ 111 ಕಿಮೀ ಎಕ್ಸಪ್ರೆಸ್ ವೇ ನಿರ್ಮಾಣಕ್ಕೆ ನೈಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಮೂರು ದಶಕಗಳ ಗುತ್ತಿಗೆ ಅವಧಿ ಮುಗಿಯುವ ಹಂತದಲ್ಲಿದೆ. ನೈಸ್ ಯೋಜನೆಗೆ ಸಂಬಂಧಿಸಿದಂತೆ 374 ಭೂವ್ಯಾಜ್ಯ ಪ್ರಕರಣಗಳು ವಿವಿಧ ಕೋರ್ಟ್ಗಳಲ್ಲಿವೆ. ಕೆಲವು ಪ್ರಕರಣಗಳಲ್ಲಿ ಭೂಸ್ವಾಧೀನವನ್ನು ಕೋರ್ಟ್ ರದ್ದುಪಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Sat, 5 July 25