ಮೋದಿ ನಿಮ್ಮ ಸರ್ಕಾರ ಬೀಳಿಸುತ್ತಾರೆ, ಹುಷಾರಾಗಿರಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಖರ್ಗೆ ಎಚ್ಚರಿಕೆ
ಕಲಬುರಗಿಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪ್ರಧಾನಿ ಮೋದಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಒಗ್ಗಟ್ಟಾಗಿರಲು ಮತ್ತು ಎಚ್ಚರಿಕೆಯಿಂದ ಇರಲು ಸಲಹೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಾಗ್ವಾದದ ನಡುವೆ ಈ ಹೇಳಿಕೆ ಮತ್ತೊಂದು ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

ಕಲಬುರಗಿ, ಏಪ್ರಿಲ್ 16: ಕರ್ನಾಟಕದ (Karnataka) ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ (CM) ಬದಲಾವಣೆಯ ಚರ್ಚೆ ಜೋರಾಗಿದೆ. ಇದರ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ಗಂಭೀರ ಆರೋಪವೊಂದು ಮಾಡಿದ್ದಾರೆ. “ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮಲ್ಲಿ ಏನೇ ಮನಸ್ತಾಪ ಇದ್ದರೂ ಒಗ್ಗಟ್ಟಾಗಿರಬೇಕು. ನೀವು ಹುಷಾರಾಗಿರಬೇಕು ಎಂದು ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಮೋದಿ ವಾಗ್ದಾಳಿ
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸೋಮವಾರ ಹರಿಯಾಣದ ಪ್ರತ್ಯೇಕ ಮೂರು ಕಡೆ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ 4 ರಷ್ಟು ಮೀಸಲಾತಿ, ಭಷ್ಟ್ರಾಚಾರ ಮತ್ತು ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದ್ದರು. ಹರಿಯಾಣದ ಹಿಸಾರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಅದನ್ನು ಧರ್ಮಾಧಾರಿತವಾಗಿ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದರು.
ನಂತರ, ಯಮುನಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂಬರ್ 1 ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅಲ್ಲದೇ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ದರ ಏರಿಕೆಯ ಮೂಲಕ ದ್ರೋಹ ಬಗೆಯಲಾಗುತ್ತಿದೆ. ಅಭಿವೃದ್ಧಿ ಚಟುವಟಿಕೆಗಳು ಪೂರ್ಣ ಸ್ಥಗಿತವಾಗಿದೆ ಎಂದಿದ್ದರು.
ಸಿದ್ದರಾಮಯ್ಯ ತಿರುಗೇಟು
ಪ್ರಧಾನಿ ಮೋದಿಯವರ ಈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದರು. “ಮುಸ್ಲಿಂ ಸಮುದಾಯದ ಹಿತರಕ್ಷಣೆಗಾಗಿಯೇ ತಲಾಖ್ ನಿಷೇಧ ಮಾಡಿದ್ದೇವೆ, ವಕ್ಪ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಒಂದೆಡೆ ತಮ್ಮನ್ನು ಮುಸ್ಲಿಂ ಸಮುದಾಯದ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದೆಡೆ ಬಜರಂಗ ದಳದ ಕಾರ್ಯಕರ್ತನಂತೆ ಕೋಮುದ್ವೇಷವನ್ನು ಉಗುಳುತ್ತಿರುವುದು ಅವರು ಕೂತಿರುವ ಕುರ್ಚಿಗೆ ಮಾಡುತ್ತಿರುವ ಅವಮಾನವಾಗಿದೆ” ಎಂದು ವಾಗ್ದಾಳಿ ಮಾಡಿದ್ದರು.
“ವಕ್ಪ್ ಬೋರ್ಡಿನಲ್ಲಿ ಮುಸ್ಲಿಂಮೇತರರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡುವ ತಿದ್ದುಪಡಿ ಕೋಮುದ್ವೇಷದಿಂದ ಕೂಡಿರುವುದು ಮೇಲ್ನೋಟದಲ್ಲಿಯೇ ಸಾಬೀತಾಗುತ್ತದೆ. ಇದೇ ಮಾನದಂಡವನ್ನು ಮುಂದಿನ ದಿನಗಳಲ್ಲಿ ಹಿಂದೂ ಮಠ-ಮಂದಿರಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಹುಟ್ಟಿಕೊಂಡರೆ ಸಮಾಜದಲ್ಲಿ ಅನವಶ್ಯಕವಾಗಿ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ? ದೇಶದ ಪ್ರಧಾನಿಯಾದವರು ಇಂತಹ ಸಂಘರ್ಷಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕೇ ಹೊರತು ಹುಟ್ಟುಹಾಕುವುದಲ್ಲ” ಎಂದಿದ್ದರು.
“ಕರ್ನಾಟಕದಲ್ಲಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಂಮರಿಗೆ ನೀಡಲಾಗಿದೆ ಎನ್ನುವ ಇನ್ನೊಂದು ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂತಹ ಆಧಾರ-ತಲೆಬುಡ ಇಲ್ಲದ ಆರೋಪಗಳನ್ನು ಮಾಡುವಾಗ ಪ್ರಧಾನಿಯವರು ಕನಿಷ‍್ಠ ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಮೋದಿ ಭಾರತವನ್ನೇ ಮಾರಿ ಹೋಗುತ್ತಾರೆ; ಗುಜರಾತ್‌ನಲ್ಲಿ ಪ್ರಧಾನಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
“ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆಯೇ ಹೊರತು ಕಡಿಮೆ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನ ಆಧಾರದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ 15ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ ಮೂರರಿಂದ ಏಳಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಅವರಿಂದ ಕಿತ್ತುಕೊಳ್ಳುವುದೇನು ಬಂತು? ಇಂತಹ ಮೂಲಭೂತ ಮಾಹಿತಿಯೂ ಇಲ್ಲದ ಪ್ರಧಾನಿ ಮೋದಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ತಮ್ಮ ಘನತೆಯನ್ನು ತಾವೇ ಹಾಳುಗೆಡಹುತ್ತಿದ್ದಾರೆ” ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಪರಸ್ಪರ ವಾಗ್ಯುದ್ದ ನಡೆಯುತ್ತಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಹೇಳಿಕೆ ಮತ್ತೊಂದು ಚರ್ಚೆಗೆ ನಾಂದಿ ಹಾಡುವ ಸಾಧ್ಯತೆ ಇದೆ.