ಸಿಎಂ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ, ನಾಯಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಆರು ತಿಂಗಳಿನಿಂದ ಸಾಕಷ್ಟು ಬದಲಾವಣೆ ಚರ್ಚೆಗಳು ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಬದಲಾಗ್ತಾರೆ, ಸಿಎಂ ಡಿಕೆ ಶಿವಕುಮಾರ್ ಆಗ್ತಾರೆ ಹೀಗೆಲ್ಲಾ ಚರ್ಚೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ಪಕ್ಷದಲ್ಲಿ ಹಲವು ದಿನಗಳಿಂದ ಗೊಂದಲ ಸೃಷ್ಟಿಯಾಗಿದ್ದು, ಕೆಲವರು ಒಂದೊಂದು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ನಾಯಕರುಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಜನವರಿ 17): ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ವಿಚಾರ ಬಗ್ಗೆ ಕಾಂಗ್ರೆಸ್ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ನಾಯಕರು ಪರೋಕ್ಷವಾಗಿ ಆರೋಪ-ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಅದರಲ್ಲೂ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಿಎಂ ಬದಲಾವಣೆ ಮಾಡಬೇಕೆಂದು ಡಿಕೆ ಶಿವಕುಮಾರ್ ಸೇರಿದಂತೆ ಅವರ ಬಣದ ಶಾಸಕರು ಪಟ್ಟು ಹಿಡಿದಿದ್ದಾರೆ. ಆದ್ರೆ, ಇತ್ತ ಸಿಎಂ ಸಿದ್ದರಾಮಯ್ಯ ಬಣ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಪೂರ್ವವಧಿ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಎನ್ನುತ್ತಿದ್ದಾರೆ. ಇದರಿಂದ ಪರಸ್ಪರ ಮುಸುಕಿನ ತಿಕ್ಕಾಟ ನಡೆಯುತ್ತಿದ್ದು, ಇದೀಗ ಇದಕ್ಕೆ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಈಗ ಸಿಎಂ ಬದಲಾವಣೆ ಅದೆಲ್ಲಾ ಇಲ್ಲ. ಯಾವಾಗ ಸಿಎಂ ಬದಲಾವಣೆ ಮಾಡಬೇಕೆಂದು ನಮಗೆ ಗೊತ್ತಿದೆ, ಆಗ ಸಿಎಂ ಬದಲಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ ಎಳೆದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಿಎಂ ಹಾಗೂ ಡಿಸಿಎಂ ಬದಲಾವಣೆ ಆಗುತ್ತಾರೆಂದು ಅದೆಲ್ಲಾ ಹೇಳಬೇಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್ ಗಾಂಧಿ ಇದ್ದೇವೆ. ಯಾವಾಗ ಏನು ಮಾಡಬೇಕು ಎಂದು ನಮಗೆ ಟಾರ್ಗೆಟ್ ಇರುತ್ತದೆ. ಅದನ್ನು ನೋಡಿಕೊಂಡು ನಾವೇ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ: ಸತೀಶ್ ಜಾರಕಿಹೊಳಿಗೆ ನೋಟಿಸ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸುರ್ಜೇವಾಲ ಸ್ಪಷ್ಟನೆ
ಇನ್ನು ಇದೇ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿನ ಗೊಂದಲಗಳ ಬಗ್ಗೆ ಖರ್ಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು. ಕಾಂಗ್ರೆಸ್ ಪಕ್ಷ ನಿಮಗೆ ಕೊಟ್ಟಿರುವ ಕೆಲಸವನ್ನು ಮೊದಲು ಮಾಡಿ. ಯಾವಾಗ ಏನು ಮಾಡಬೇಕೆಂಬುದು ಹೈಕಮಾಂಡ್ಗೆ ಗೊತ್ತಿದೆ. ಕೆಲವರು ಹೇಳಿದ್ದಂತೆ ಹೈಕಮಾಂಡ್ ನಡೆಯಲ್ಲ. ಸುಮ್ನೆ ಮಾತಾಡುವುದ್ರಿಂದ ಪ್ರಯೋಜನ ಆಗಲ್ಲ ಎಂದು ಎಚ್ಚರಿಕೆ ನೀಡಿದರು.
ಹೈಕಮಾಂಡ್ ಇದೆ. ನಾವೆಲ್ಲಾ ಇದ್ದೇವೆ, ನಾವು ಸೂಕ್ತವಾದ ನಿರ್ಣಯ ತೆಗೆದುಕೊಳ್ಳುತ್ತೇವೆ. ವಿವಾದಗಳು ನಡೆಯಬಾರದು, ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಎಲ್ಲ ನಾಯಕರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು. ಯಾವಾಗ ನಿರ್ಣಯ ತೆಗೆದುಕೊಳ್ಳಬೇಕು. ಅದು ನಮಗೆ ಬಿಟ್ಟಿದ್ದು ಎಂದು ತಮ್ಮ ಪಕ್ಷದ ನಾಯಕರುಗಳಿಗೆ ಖಡಕ್ ಸಂದೇಶ ರವಾನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ