ಗುಡ್ ನ್ಯೂಸ್: ನಮ್ಮ ಮೆಟ್ರೋ ಹಳದಿ ಮಾರ್ಗ ಆರಂಭಕ್ಕೆ ಮುಹೂರ್ತ ನಿಗದಿ
ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾರ್ಯಾರಂಭಕ್ಕೆ ಬೆಂಗಳೂರಿನಲ್ಲಿ ಜನರು ಕಾಯುತ್ತಿದ್ದಾರೆ. ನಮ್ಮ ಮೆಟ್ರೋದ ಹಳದಿ ಮಾರ್ಗ ಆರಂಭಕ್ಕೆ ಮುಹೂರ್ತ ಕೂಡಿ ಬಂದಿದೆ. ಯಾವಾಗ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಸಿದ್ದಾರೆ. ಆದರೆ, ರೈಲು ಕೇಲೆ ಐದು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಮೇ 16: ನಮ್ಮ ಮೆಟ್ರೋದ (Namma Metro) ಹಳದಿ ಮಾರ್ಗ ಯಾವಾಗ ಕಾರ್ಯಾಚರಣೆ ಶುರು ಮಾಡುತ್ತದೆ ಎಂದು ಕಾಯುತ್ತಿರುವ ಬೆಂಗಳೂರು ಮಂದಿಗೆ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಿಹಿ ಸುದ್ದಿ ನೀಡಿದೆ. ನಮ್ಮ ಮೆಟ್ರೋದ ಹಳದಿ ಮಾರ್ಗ (Yellow Line) ಜೂನ್‌ನಲ್ಲಿ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ನ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಪೂರ್ಣಪ್ರಮಾಣದ ಕಾರ್ಯಾಚರಣೆ ಪ್ರಾರಂಭವಾಗುವುದಿಲ್ಲ. ಮೊದಲಿಗೆ, ರೈಲುಗಳು ಕೆಲವು ಮುಖ್ಯ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತವೆ. ಸಂಪೂರ್ಣ ಮಾರ್ಗವನ್ನು ನಂತರ ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ.
ಹಳದಿ ಮಾರ್ಗದ ನಮ್ಮ ಮೆಟ್ರೋ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸಲಿದೆ. 19.15 ಕಿಮೀ ನ ಈ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ಆರಂಭದಲ್ಲಿ ಐದು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರಲಿದೆ. ಮೆಟ್ರೋ ರೈಲು ಹಳಿಗಳ ಜೋಡಣೆ ಮತ್ತು ನಿಲ್ದಾಣ ನಿರ್ಮಾಣ ಕಾರ್ಯ ಮುಗಿದಿವೆ. ಆದರೆ, ಈ ಮಾರ್ಗಕ್ಕೆ ಅಗತ್ಯವಿರುವ ಚಾಲಕರಹಿತ ರೈಲುಗಳು ತಡವಾಗಿ ಬೆಂಗಳೂರಿಗೆ ಬಂದಿದ್ದು ಕಾರ್ಯಾಚಾರಣೆ ವಿಳಂಬಕ್ಕೆ ಕಾರಣವಾಗಿದೆ. ಬಿಎಂಆರ್‌ಸಿಎಲ್ ಈಗ ಕೇವಲ ಮೂರು ರೈಲುಗಳನ್ನು ಮಾತ್ರ ಓಡಿಸಲು ಯೋಜಿಸಿದೆ. ಇವು ಪ್ರತಿ 30 ನಿಮಿಷಗಳಿಗೊಮ್ಮೆ ಸಂಚರಿಸುತ್ತವೆ.
ಇದೀಗ ಕೇವಲ ಮೂರು ರೈಲುಗಳು ಮಾತ್ರ ಇರುವುದರಿಂದ, ಪ್ರತಿ ಅರ್ಧಗಂಟೆಗೆ ಒಂದು ರೈಲು ಓಡಿಸುತ್ತೇವೆ. ಹೆಚ್ಚಿನ ರೈಲುಗಳು ಬಂದಂತೆ, ನಾವು ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸುತ್ತೇವೆ. ಮತ್ತು ಬಾಕಿ ನಿಲ್ದಾಣಗಳನ್ನೂ ಕೂಡ ತೆರೆಯುತ್ತೇವೆ” ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ನಿರಾಸೆ
ಹೊಸ ಮೆಟ್ರೋ ಮಾರ್ಗದಲ್ಲಿ ಪ್ರತಿದಿನ ಸಂಚರಿಸಬೇಕೆಂದು ಆಶಿಸುತ್ತಿದ್ದ ಅನೇಕ ಜನರು ಈಗ ನಿರಾಶೆಗೊಂಡಿದ್ದಾರೆ. “ಹಳದಿ ಮಾರ್ಗದ ಕೆಲಸ ಮುಗಿದು ತಿಂಗಳುಗಳೇ ಕಳೆದಿವೆ. ಶೀಘ್ರದಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಆದರೆ, ಕೆಲವು ರೈಲುಗಳು ಸಂಚರಿಸುತ್ತವೆ ಮತ್ತು ಕೆಲವೇ ನಿಲ್ದಾಣಗಳಲ್ಲಿ ನಿಲುಗಡೆಯಾಗುವುತ್ತವೆ ಎಂದು ಹೇಳುತ್ತಿದ್ದಾರೆ. ಇದು ತುಂಬಾ ನಿರಾಶಾದಾಯಕವಾಗಿದೆ ” ಎಂದು ಕೋಡಿಚಿಕನಹಳ್ಳಿಯ ಮತ್ತೋರ್ವ ನಿವಾಸಿ ಸ್ನೇಹಾ ಎಂ. ಹೇಳಿದರು.
ಬೋಗಿಗಳ ವಿತರಣೆಯಲ್ಲಿ ವಿಳಂಬ
2019 ರಲ್ಲಿ, ಸಿಆರ್‌ಆರ್‌ಸಿ ಎಂಬ ಚೀನಾದ ಕಂಪನಿಯು 216 ರೈಲು ಬೋಗಿಗಳನ್ನು ಒದಗಿಸಲು 1,578 ಕೋಟಿ ರೂ. ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ, ಕಂಪನಿಯು ಸಮಯಕ್ಕೆ ಸರಿಯಾಗಿ ಬೋಗಿಗಳನ್ನು ನೀಡಲಿಲ್ಲ. ಹೀಗಾಗಿ, ಬಿಎಂಆರ್‌ಸಿಎಲ್ ಹಲವಾರು ಬಾರಿ ಪತ್ರ ಬರೆದಿದೆ. ಮತ್ತು ಸಿಆರ್‌ಆರ್‌ಸಿಯ ಬ್ಯಾಂಕ್ ಖಾತೆಯಿಂದ 372 ಕೋಟಿ ರೂ. ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತು. ನಂತರ, ಸಿಆರ್‌ಆರ್‌ಸಿ ಕಂಪನಿಯು ಕೋಲ್ಕತ್ತಾದ ಟಿಟಾಘರ್ ರೈಲ್ ಸಿಸ್ಟಮ್ಸ್ ಎಂಬ ಕಂಪನಿಯೊಂದಿಗೆ ಕೈಜೋಡಿಸಿತು. ಈ ಪಾಲುದಾರಿಕೆ ನಂತರ ಬೋಗಿಗಳ ತಯಾರಿಕೆಯಲ್ಲಿ ವೇಗ ದೊರೆತಿತು.
ಇದನ್ನೂ ಓದಿ: ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್ಡೇಟ್, ಬೆಂಗಳೂರಿನತ್ತ ಮೂರನೇ ಚಾಲಕರಹಿತ ರೈಲು
ಮೂರನೇ ರೈಲು ಮೇ 13 ರ ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋ ತಲುಪಿದೆ. ಮೇ 15 ರಂದು ಪರೀಕ್ಷೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದ ವೇಳೆಗೆ ಇನ್ನೂ ಎರಡು ರೈಲುಗಳು ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದರು. 2024ರ ಮಾರ್ಚ್ 7 ರಂದು ಬಿಎಂಆರ್‌ಸಿಎಲ್ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 pm, Fri, 16 May 25








