AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್​ ಬುಕ್ಕಿಂಗ್​ ಎಲ್ಲಿ ಮಾಡಬೇಕು, ದರ ಎಷ್ಟು? ಇಲ್ಲಿದೆ ವಿವರ

ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಆರಂಭವಾಗಿದೆ. ಪ್ರತಿ ಭಾನುವಾರ ಮತ್ತು ಎರಡನೇ, ನಾಲ್ಕನೇ ಶನಿವಾರಗಳಂದು ವಿಧಾನಸೌಧ ಪ್ರವಾಸ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು. 15 ವರ್ಷದೊಳಗಿನ ಮಕ್ಕಳು ಮತ್ತು SSLC ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ. 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ ನಿಗದಿಪಡಿಸಲಾಗಿದೆ. ವಿಧಾನಸೌಧದ ಇತಿಹಾಸ, ವಾಸ್ತುಶಿಲ್ಪ ಮತ್ತು ಮಹತ್ವವನ್ನು ತಿಳಿದುಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ.

ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್​ ಬುಕ್ಕಿಂಗ್​ ಎಲ್ಲಿ ಮಾಡಬೇಕು, ದರ ಎಷ್ಟು? ಇಲ್ಲಿದೆ ವಿವರ
ವಿಧಾನಸೌಧ
Anil Kalkere
| Updated By: ವಿವೇಕ ಬಿರಾದಾರ|

Updated on: Jun 01, 2025 | 6:49 PM

Share

ಬೆಂಗಳೂರು, ಜೂನ್​ 01: ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದಲೇ ತುಂಬಿರುತ್ತಿದ್ದ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ (Vidhan Soudha) ಒಳಕ್ಕೆ ಇನ್ನು ಜನಸಾಮಾನ್ಯರು ಕೂಡ ಹೋಗಬಹುದಾಗಿದೆ. ದೂರದ ಊರಿನಿಂದ ಬೆಂಗಳೂರಿಗೆ (Bengaluru) ಬರುವ ಹಲವರಿಗೆ ವಿಧಾನಸೌಧ ನೋಡಬೇಕು ಎಂಬ ಆಸೆ ಇರುತ್ತದೆ. ಆದರೆ, ಇಷ್ಟು ದಿನಗಳ ಕಾಲ ಹೊರಗಿನಿಂದಲೇ ವಿಧಾನಸೌಧವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈಗ ವಿಧಾನಸೌಧದ ಒಳಗೆ ಹೋಗಬಹುದು. ಅದರೊಳಗೆಲ್ಲ ಸುತ್ತಾಡಬಹುದು. ಆ ಭವ್ಯ ಕಟ್ಟಡವನ್ನು ಮುಟ್ಟಬಹುದು. ಹೌದು, ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ‘ಮಾರ್ಗದರ್ಶಿ ಪ್ರವಾಸ’ (ಗೈಡ್ ಟೂರ್) ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ. ವಿಧಾನಸೌಧ ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.

ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ 30 ಸದಸ್ಯರ 10 ತಂಡಗಳಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಇರುತ್ತದೆ. ಅಂದರೆ, ದಿನಕ್ಕೆ 300 ಮಂದಿಗೆ ಮಾತ್ರ ವಿಧಾ‌ನಸೌಧ ನೋಡುವ ಅವಕಾಶ ನೀಡಲಾಗಿದೆ. ಇಂದಿನಿಂದ ಪ್ರವಾಸ ಆರಂಭವಾಗಿದ್ದು, ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಭವ್ಯ ಮೆಟ್ಟಿಲುಗಳ ವಿವರಣೆಯನ್ನು ಮಾರ್ಗದರ್ಶಿಗಳು ನೀಡುತ್ತಾರೆ.

ವಿಧಾನಸೌಧದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡಲು ಸದ್ಯ 10 ಗೈಡ್​ಗಳನ್ನು ನೇಮಕ ಮಾಡಲಾಗಿದೆ. ಇವರು ಕನ್ನಡ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ವಿವರಣೆ ನೀಡುತ್ತಾರೆ. ವಿಧಾನಸೌಧ ವೀಕ್ಷಣೆಗೆ ಆನ್​ಲೈನ್​ನಲ್ಲಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕು. https://kstdc.co/activities ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಬೇಕು. 15 ವರ್ಷದೊಳಗಿನ ಮಕ್ಕಳು, ಎಸ್​ಎಸ್​ಎಲ್​ಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. 16 ವರ್ಷ ಮೇಲ್ಪಟ್ಟ ಪ್ರವಾಸಿಗರಿಗೆ ತಲಾ 50 ರೂಪಾಯಿ ಟಿಕೆಟ್​ ನಿಗದಿ ಮಾಡಲಾಗಿದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ
Image
ಭೂಕುಸಿತ: ಪಶ್ಚಿಮ ಘಟ್ಟದ ಧಾರಣ ಸಾಮರ್ಥ್ಯ ಅಧ್ಯಯನಕ್ಕೆ ಸಮಿತಿ ರಚನೆ
Image
ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಇದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್
Image
ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
Image
ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ?

ಇದನ್ನೂ ಓದಿ: ಯುವತಿ ಮೇಲೆ ಬಸ್​ ಹತ್ತಿಸಲು ಯತ್ನಿಸಿದ BMTC ಬಸ್​ ಚಾಲಕ, ವಿಡಿಯೋ ವೈರಲ್​

ವಿಧಾನಸೌಧ ವೀಕ್ಷಣೆಗೆ ಪ್ರತಿ ತಂಡಕ್ಕೆ 90 ನಿಮಿಷ ಸಮಯ ಅವಕಾಶ ನೀಡಲಾಗಿದೆ. ವಿಧಾನಸೌಧದ ಮೂರನೇ ಪ್ರವೇಶ ದ್ವಾರದ ಮೂಲಕ ಪ್ರವಾಸ ಆರಂಭವಾಗುತ್ತದೆ. ಪ್ರವಾಸ ಆರಂಭಕ್ಕೂ 20 ನಿಮಿಷ ಮೊದಲು ಹಾಜರಿರಬೇಕು. ಟಿಕೆಟ್ ಬುಕ್ ಮಾಡಿದವರು ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ನಿಗದಿತ ಸ್ಥಳದಲ್ಲಿ ಫೋಟೋ ತೆಗೆದುಕೊಳ್ಳಲು ಅವಕಾಶವಿರುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ