ಸಾರ್ವಜನಿಕರಿಗೂ ಇನ್ಮುಂದೆ ವಿಧಾನಸೌಧ ವೀಕ್ಷಣೆಗೆ ಅವಕಾಶ: ರಾಜ್ಯ ಸರ್ಕಾರದ ವಿನೂತನ ಪ್ರಯತ್ನ
ಕರ್ನಾಟಕ ಸರ್ಕಾರವು ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡುವ ಹೊಸ ಯೋಜನೆಗೆ ಮುಂದಾಗಿದೆ. ಜೂನ್ 1ರಿಂದ ಆರಂಭವಾಗುವ "ವಿಧಾನಸೌಧ ಮಾರ್ಗದರ್ಶಿ ಪ್ರವಾಸ"ದ ಮೂಲಕ, ಸಾರ್ವಜನಿಕರು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳನ್ನು ವೀಕ್ಷಿಸಬಹುದು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಕಡ್ಡಾಯವಾಗಿದೆ. ವಿಧಾನಸೌಧ ಪ್ರವಾಸದ ವಿಶೇಷತೆಗಳು ಏನು ತಿಳಿಯಿರಿ.

ಬೆಂಗಳೂರು, ಮೇ 26: ವಿಧಾನಸೌಧ (Vidhana Soudha) ಇದು ಕರ್ನಾಟಕ ಆಡಳಿತದ ಶಕ್ತಿ ಕೇಂದ್ರ. ಯಾವುದೇ ಸರ್ಕಾರ ಬರಲಿ, ಇದೇ ಐತಿಹಾಸಿಕ ಕಟ್ಟಡದಿಂದಲೇ ಆಡಳಿತದ ಪಯಣ ಶುರು ಮಾಡುವುದು. ಅಷ್ಟೇ ಅಲ್ಲ, ವಿಶ್ವದಲ್ಲೇ ಅತೀ ಹೆಚ್ಚು ಪ್ರಸಿದ್ದಿ ಪಡೆದ ಹಾಗೂ ಭಾರತದ ಅತೀ ದೊಡ್ಡ ಆಡಳಿತದ ಕಟ್ಟಡ ಎಂದೇ ಹೆಸರು ವಾಸಿಯಾಗಿರೋ ಶಕ್ತಿ ಕೇಂದ್ರ. ಇದನ್ನ ನೋಡೋದಕ್ಕೆ ದೇಶ ವಿದೇಶದಿಂದ ಜನ ಬರ್ತಾರೆ. ನೆನಪಿಗಾಗಿ ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ ಯಾರೂ ಸಹ ಭವ್ಯ ಕಟ್ಟಡದ ಆವರಣದೊಳಗೆ ಬರೋದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ವಿಧಾನಸೌಧಕ್ಕೆ ಸಾರ್ವಜನಿಕರಿಗೂ (public) ಪ್ರವೇಶ ನೀಡಲು ರಾಜ್ಯ ಸರ್ಕಾರ ಹೊಸ ಹಾಗೂ ವಿನೂತನ ಕಾರ್ಯಕ್ರಮ ಏರ್ಪಡಿಸುತ್ತಿದೆ.
‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’
ಇದೊಂದು ಐತಿಹಾಸಿಕ ತೀರ್ಮಾನ. ಇದುವರೆಗೂ ಯಾರು ಕೈಗೊಳ್ಳದ, ಇಟ್ಟಿರದ ಹೆಜ್ಜೆಯನ್ನ ರಾಜ್ಯ ಸರ್ಕಾರ ಇಡುತ್ತಿದೆ. ಸಾಮಾನ್ಯ ವ್ಯಕ್ತಿಗೂ ವಿಧಾನಸೌಧ ವೀಕ್ಷಣೆಗೆ ಸುವರ್ಣ ಅವಕಾಶ ಕಲ್ಪಿಸಲಾಗುತ್ತಿದೆ. ಅದರಲ್ಲೂ ಶಕ್ತಿ ಕೇಂದ್ರದಲ್ಲಿ ಶಾಸಕರು, ಸಚಿವರು ಕುರಿತುಕೊಳ್ಳುವ ವಿಧಾನಸಭೆ, ವಿಧಾನ ಪರಿಷತ್ ನೋಡೋದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ ಅನ್ನೋ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಶುರು ಮಾಡಲಾಗುತ್ತಿದೆ.
ಇದನ್ನೂ ಓದಿ: ಸಸ್ಯ ಕಾಶಿ ಲಾಲ್ ಬಾಗ್ನಲ್ಲಿ ನೆಲಕ್ಕುರುಳಿದ 150 ವರ್ಷದ ಹಳೆ ವೃಕ್ಷ
ಸಾರ್ವಜನಿಕರಿಗೂ ಇನ್ಮುಂದೆ ವಿಧಾನಸೌಧದ ಒಳಗೆ ನೋಡುವ ಅವಕಾಶ ಮಾಡಿಕೊಡೋದಕ್ಕೆ ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಿದೆ. ನಿನ್ನೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಧಾನಸೌಧ ಮಾರ್ಗದರ್ಶಿ ಪ್ರವಾಸವನ್ನ ಉದ್ಘಾಟನೆ ಮಾಡಲಾಯ್ತು. ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಪ್ರಯತ್ನದಿಂದ ಇಂತದೊಂದು ಕಾರ್ಯಕ್ರಮ ಆರಂಭ ಮಾಡಲಾಗಿದೆ. ಇದರ ಜೊತೆ ಭದ್ರತೆ ಕೂಡ ಇರುತ್ತದೆ ಅಂತ ಯುಟಿ ಖಾದರ್ ಹೇಳಿದ್ದಾರೆ.
ವಿಧಾನಸೌಧ ಪ್ರವಾಸದ ವಿಶೇಷತೆಗಳು
- ಪ್ರತೀ ಭಾನುವಾರ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ
- ಆನ್‌ಲೈನ್‌ನಲ್ಲಿ (https://kstdc.co/activities) ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು.
- ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭ
- ವಿಧಾನಸೌಧ ಟೂರ್ಗೆ 16 ವರ್ಷ ಮೇಲ್ಪಟ್ಟವರಿಗೆ 50 ರೂ. ಟಿಕೆಟ್.
- 16 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಉಚಿತ.
- ವಿಧಾನಸೌಧ ಟೂರ್ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.
- ದಿನಕ್ಕೆ ಪ್ರತೀ ಬ್ಯಾಚ್‌ನಲ್ಲಿ 30 ಜನರಂತೆ ವಿಧಾನಸೌಧ ವೀಕ್ಷಣೆ.
- ದಿನಕ್ಕೆ 300 ಮಂದಿಗೆ ಮಾತ್ರ ವಿಧಾನಸೌಧ ನೋಡುವ ಅವಕಾಶ
- ಒಂದು ಬ್ಯಾಚ್ ವಿಧಾನಸೌಧ ಪ್ರವಾಸಕ್ಕೆ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ಸಮಯ.
- ವಿಧಾನಸೌಧದ ಗೇಟ್ ನಂಬರ್ 3 ಮೂಲಕ ಟೂರ್ ಆರಂಭ
- 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು
- ಟಿಕೆಟ್ ಬುಕ್ ಮಾಡಿದವರು ಗುರುತಿನ ಚೀಟಿ ತರಬೇಕು
- ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಫೋಟೋ ತೆಗೆಯಲು ಅವಕಾಶ
- ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ವಿಧಾನಸೌಧ ಟೂರ್ಗೆ ಗೈಡ್‌ಗಳ ನೇಮಕ
ಇದನ್ನೂ ಓದಿ: 3 ಸಾವಿರ ಕೋಟಿ ರೂ. ಪಿಎಫ್ ಬಾಕಿ ಉಳಿಸಿಕೊಂಡ ಕೆಎಸ್ಆರ್ಟಿಸಿ, ಬಿಎಂಟಿಸಿ: ಪಿಎಫ್ ಸಿಗದೆ ಸಂಕಷ್ಟದಲ್ಲಿ ಸಾರಿಗೆ ನೌಕರರು
ವಿಧಾನಸೌಧದಲ್ಲಿ ಇಂತಹದೊಂದು ವಿನೂತನ ಕಾರ್ಯಕ್ರಮ ಮಾಡುತ್ತಿರೋದು ಇದೇ ಮೊದಲೇನಲ್ಲ. ಈಗಾಗಲೇ ಇದೇ ಶಕ್ತಿ ಕೇಂದ್ರದಲ್ಲಿ ಐತಿಹಾಸಿಕ ಪುಸ್ತಕ ಮೇಳ ಮಾಡಿ ಯಶಸ್ವಿ ನಡೆಸಲಾಗಿದೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪುಸ್ತಕ ಕೊಂಡು ವಿಧಾನಸೌಧದ ರೌಂಡ್ಸ್ ಹಾಕಿದರು. ಇದೀಗ ವಿಧಾನಸೌಧದ ಒಳಗೆ ಹೋಗಿ ಕಣ್ತುಂಬಿಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಇಂತಹದೊಂದು ಅವಕಾಶ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಪ್ರವಾಸಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ವರದಿ: ಈರಣ್ಣಾ ಬಸವಾ ಟಿವಿನೈನ್ ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Mon, 26 May 25








