ಬೆಂಗಳೂರು ಮಂಗಳೂರು ವಾಹನ ಸವಾರರೇ ಗಮನಿಸಿ: ಶಿರಾಡಿ ಘಾಟ್ ರಸ್ತೆಯ ಹಲವೆಡೆ ಭೂಕುಸಿತ
ಹಾಸನ ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆ ಭಾನುವಾರದಿಂದ ಮತ್ತಷ್ಟು ಬಿರುಸುಗೊಂಡಿದೆ. ಈ ವರ್ಷ ಮೊದಲ ಮಳೆಗೇ ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಭಾರೀ ಗಾಳಿ ಮಳೆಗೆ ಹೊಟೆಲ್ ಗೋಡೆ ಕುಸಿದು ನಾಲ್ವರು ಗಾಯಗೊಂಡಿದ್ದಾರೆ.

ಹಾಸನ, ಮೇ 26: ಹಾಸನ ಜಿಲ್ಲೆಯಲ್ಲಿ ವರುಣಾರ್ಭಟ ಜೋರಾಗಿದ್ದು, ಈ ವರ್ಷ ಮುಂಗಾರಿನ ಮೊದಲ ಮಳೆಗೇ ಹತ್ತಾರು ಕಡೆ ಅವಘಡಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ (Shiradi Ghat) ಮಾರ್ಗದಲ್ಲಿ ಭಾನುವಾರ ಹಲವು ಕಡೆ ಗುಡ್ಡ ಕುಸಿದು ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಆನೆಮಹಲ್ (Anemahal) ಬಳಿ ಹೆದ್ದಾರಿಯ ಬದಿಯ ಮಣ್ಣು ಕುಸಿದು (Landslides) ರಸ್ತೆಯೇ ಮಣ್ಣೀನಿಂದ ಆವೃತವಾಗಿದೆ. ಇದೇ ಮಾರ್ಗದ ಅಡ್ಡನಗುಡ್ಡ, ದೊಡ್ಡತಪ್ಲು ಬಳಿ ಕೂಡ ಅತಿಯಾದ ಮಳೆಯಿಂದ ಬರೆ ಕುಸಿದು ರಸ್ತೆ ಸಂಚಾರವೇ ಬಂದ್ ಆಗುವ ಭೀತಿ ಎದುರಾಗಿದೆ.
ಅತಿಯಾದ ವಾಹನದಟ್ಟಣೆಯಿಂದ ಭಾನುವಾರ ಕೆಲ ಕಾಲ ಸಂಚಾರದ ಮಾರ್ಗವನ್ನೇ ಬದಲಾಯಿಸಲಾಗಿತ್ತು. ಬೆಳಗ್ಗೆಯಿಂದ ಎಡೆಬಿಡದೆ ಸುರಿದ ಮಳೆಯಿಂದ ಸಕಲೇಶಫುರ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಮಲ್ನಾಡ್ ಕೆಫೆ ಹೊಟೆಲ್ ಗೋಡೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಂಡದಲ್ಲಿ ಸಿಲುಕಿದ ಸಾರಿಗೆ ಬಸ್: ಪ್ರಯಾಣಿಕರ ಪರದಾಟ
ಈ ವರ್ಷ ಪೂರ್ವ ಮುಂಗಾರು ಮಳೆಯ ಅಬ್ಬರವೇ ಜನರನ್ನ ಹೈರಾಣಾಗಿಸಿದ್ದು, ಅದರ ಜತೆಗೇ ಈಗ ಮುಂಗಾರು ಸಹ ಸೇರಿಕೊಂಡಿದೆ. ಸಕಲೇಶಪುರ ತಾಲ್ಲೂಕಿನ ಬೊಮ್ಮನಕೆರೆ ಬಳಿ ಸಾರಿಗೆ ಬಸ್ ಒಂದು ರಸ್ತೆ ಬದಿಯ ಹೊಂಡದಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವಂತಾಗಿತ್ತು. ಬೇಲೂರು ತಾಳ್ಲೂಕಿನ ಕುಪ್ಪಗೋಡು ಬಳಿಕ ಕೆರೆಗೋಡಿ ಬಿದ್ದು ಹತ್ತಾರು ಎಕರೆ ಪ್ರದೇಶದ ಭತ್ತದ ಗದ್ದೆಗಳು ಜಲಾವೃತವಾಗಿವೆ. ನದಿ ತೊರೆಗಳಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದ್ದು , ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಯ ಬಿಡಲಾಗಿದೆ.
ಇದನ್ನೂ ಓದಿ: ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಮುಂಗಾರುಪೂರ್ವ ಮಳೆ ರಾಜಧಾನಿ ಬೆಂಗಳೂರಿನಲ್ಲಿ ಅನಾಹುತಗಳನ್ನು ಸೃಷ್ಟಿಸಿದ್ದೆ, ಮುಂಗಾರು ಮಳೆ ಹಲವು ಜಿಲ್ಲೆಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







